Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಮೀನುಗಾರಿಕೆ ಬೋಟ್: ಡೀಸೆಲ್ ರೋಡ್ ಸೆಸ್ ವಿನಾಯಿತಿಗೆ ಮನವಿ

ಮೀನುಗಾರಿಕೆ ಬೋಟ್: ಡೀಸೆಲ್ ರೋಡ್ ಸೆಸ್ ವಿನಾಯಿತಿಗೆ ಮನವಿ

ಉಡುಪಿ: ಮೀನುಗಾರಿಕೆ ಬೋಟುಗಳು ಬಳಸುವ ಡೀಸೆಲ್ ಮೇಲೆ ಕೇಂದ್ರ ಸರ್ಕಾರ ವಿಧಿಸುತ್ತಿರುವ ರೋಡ್ ಸೆಸ್ ಗೆ ವಿನಾಯಿತಿ ನೀಡುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಮೀನುಗಾರಿಕೆ ಸಚಿವ ಗಿರಿರಾಜ ಸಿಂಗ್, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ರಾಜ್ಯ ಮೀನುಗಾರಿಕೆ ಸಚಿವ ಎಸ್. ಅಂಗಾರ ಹಾಗೂ ಕರಾವಳಿಯ ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಅನಂತ್ ಕುಮಾರ್ ಹೆಗಡೆ ಹಾಗೂ ಬಿ. ವೈ. ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿರುವುದಾಗಿ ಯಶಪಾಲ್ ತಿಳಿಸಿದ್ದಾರೆ.

ಮೀನುಗಾರಿಕೆ ವಿದೇಶಿ ವಿನಿಮಯ, ಉದ್ಯೋಗಾವಕಾಶ ಹಾಗೂ ಪೌಷ್ಠಿಕಾಂಶವುಳ್ಳ ಆಹಾರದ ಪೂರೈಕೆ ಮೂಲಕ ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿ ದೇಶದ ಜಿಡಿಪಿಗೆ 5 ಶೇ.ದಷ್ಟು ಕೊಡುಗೆ ನೀಡುತ್ತಿದೆ.

ಯಾಂತ್ರೀಕೃತ ಮೀನುಗಾರಿಕೆ ಬೋಟುಗಳು ಇಂಧನವಾಗಿ ಡೀಸೆಲ್ ಬಳಸುತ್ತಿದ್ದು, ಈ ಡೀಸೆಲ್ ಮೇಲೆ ಸರ್ಕಾರ ರೋಡ್ ಸೆಸ್ ವಿಧಿಸುತ್ತಿದೆ. ಈಚಿನ ದಿನಗಳಲ್ಲಿ ಡೀಸೆಲ್ ಬೆಲೆಯಲ್ಲಿ ಗಣನೀಯ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಮೀನುಗಾರರು ಆರ್ಥಿಕವಾಗಿ ತೀರಾ ಸಂಕಷ್ಟಕ್ಕೀಡಾಗಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರ ಮೀನುಗಾರರ ಬಹು ದಶಕಗಳ ಬೇಡಿಕೆಯಾಗಿದ್ದ ಪ್ರತ್ಯೇಕ ಮೀನುಗಾರಿಕೆ ಇಲಾಖೆ ರೂಪಿಸಿ ಆತ್ಮನಿರ್ಭರ ಯೋಜನೆ ಮೂಲಕ ಮೀನುಗಾರಿಕೆ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ಜಾರಿಗೆ ತಂದಿದ್ದು, ಮುಂಬರುವ ಕೇಂದ್ರ ಬಜೆಟ್ ನಲ್ಲಿ ಈ ಬಗ್ಗೆ ಸರ್ಕಾರ ಸೂಕ್ತ ನಿರ್ಣಯ ತಳೆದು ಮೀನುಗಾರಿಕೆಗೆ ಬಳಸುವ ಡೀಸೆಲ್ ಮೇಲಿನ ರೋಡ್ ಸೆಸ್ ವಿನಾಯಿತಿ ನೀಡಲು ಕ್ರಮ ಕೈಗೊಳ್ಳುವ ಮೂಲಕ ಮೀನುಗಾರಿಕೆಗೆ ಇನ್ನಷ್ಟು ಪ್ರೋತ್ಸಾಹ ನೀಡುವಂತಾಗಲಿ ಎಂದು ಯಶಪಾಲ್ ಆಶಿಸಿದ್ದಾರೆ.

 

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!