Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ `ದೇವಾಲಯಗಳು ಊರಿನ ಹೃದಯವಿದ್ದಂತೆ'

`ದೇವಾಲಯಗಳು ಊರಿನ ಹೃದಯವಿದ್ದಂತೆ’

ಉಡುಪಿ: ಮನುಷ್ಯನ ಯಾವುದೇ ಅಂಗ ಊನವಾದರೂ ಪರವಾಗಿಲ್ಲ. ಆದರೆ, ಹೃದಯಕ್ಕೆ ತೊಂದರೆಯಾದರೆ ವ್ಯಕ್ತಿ ಬದುಕುವುದೇ ಅಸಾಧ್ಯ. ಹೃದಯ ಸರಿಯಾಗಿದ್ದಲ್ಲಿ ಮಾತ್ರ ಜೀವನ ಸುಗಮವಾಗಿ ಸಾಗುತ್ತದೆ. ಅಂತೆಯೇ ದೇವಾಲಯಗಳು ಊರಿನ ಹೃದಯವಿದ್ದಂತೆ ಎಂದು ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದರು.

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಾಲಯದ ನೂತನ ಆಡಳಿತ ಕಚೇರಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಊರು ಸ್ವಸ್ಥವಾಗಬೇಕಾದಲ್ಲಿ ಆ ಊರಿನ ದೇವಾಲಯಗಳು ಸರಿಯಾಗಿರಬೇಕು. ಈ ನಿಟ್ಟಿನಲ್ಲಿ ಕಡಿಯಾಳಿ ದೇವಾಲಯ ಜೀರ್ಣೋದ್ಧಾರಗೊಳ್ಳುತ್ತಿರುವುದು ಶುಭದ ಸಂಕೇತ ಎಂದರು.

ಅವಿನಾಭಾವ ಸಂಬಂಧ
ಉಡುಪಿ ಶ್ರೀಕೃಷ್ಣಮಠಕ್ಕೂ ಕಡಿಯಾಳಿ ಮಹಿಷಮರ್ದಿನಿ ದೇವಾಲಯಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಉಲ್ಲೇಖಿಸಿದ ಸೋದೆ ಶ್ರೀಪಾದರು, ಪ್ರತಿ ತಿಂಗಳೂ ಕೃಷ್ಣಮಠದಿಂದ ಕಡಿಯಾಳಿ ದೇವಾಲಯಕ್ಕೆ ವಂತಿಗೆ ನೀಡುವ ಕ್ರಮ ಲಾಗಾಯ್ತಿನಿಂದ ಚಾಲ್ತಿಯಲ್ಲಿದೆ. ನವರಾತ್ರಿ ಸಂದರ್ಭ ವಿಜಯದಶಮಿಯಂದು ಕೃಷ್ಣಮಠದ ಆಡಳಿತ ವರ್ಗದವರು ಕಡಿಯಾಳಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುವುದು ಸಂಪ್ರದಾಯ. ಕಡಿಯಾಳಿಯ ಮಹಿಷಮರ್ದಿನಿ ಶ್ರೀಕೃಷ್ಣನ ಸೋದರಿ ಎಂಬ ಪ್ರತೀತಿ ಇದೆ ಎಂದರು.

ತಮಗೂ ಕಡಿಯಾಳಿಗೂ ನಂಟು ಇದೆ ಎಂದು ಸ್ಮರಿಸಿದ ಶ್ರೀಗಳು ತಮ್ಮ ಪೂರ್ವಾಶ್ರಮಮದ ಮನೆ ಕಡಿಯಾಳಿ ಸನಿಹದಲ್ಲೇ ಇದ್ದು, ತಮ್ಮ ವಂಶಸ್ಥರು ಈ ದೇವಳದಲ್ಲಿ ತಂತ್ರಿಗಾರಿಕೆ ಮಾಡುತ್ತಿರುವುದಾಗಿ ತಿಳಿಸಿದರು. ತಾವು ಚಿಕ್ಕವರಿದ್ದಾಗ ಅನೇಕ ಬಾರಿ ದೇವಳಕ್ಕೆ ಆಗಮಿಸುತ್ತಿದ್ದುದನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಶ್ರೀದೇವಳದ ವೆಬ್ ಸೈಟ್ ಅನಾವರಣಗೊಳಿಸಲಾಯಿತು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ ಅಂಚನ್, ನಗರಸಭಾ ಸದಸ್ಯೆ ಗೀತಾ ಶೇಟ್, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಎ. ಸುವರ್ಣ, ದೇವಳ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ ಹೆಗ್ಡೆ, ದೇವಳದ ಆಡಳಿತಾಧಿಕಾರಿ ಗಣೇಶ ರಾವ್ ಇದ್ದರು.

ದೇವಳದ ಆಡಳಿತ ಸಮಿತಿ ಅಧ್ಯಕ್ಷ ಡಾ. ರವಿರಾಜ ಆಚಾರ್ಯ ಸ್ವಾಗತಿಸಿದರು. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ನಿರೂಪಿಸಿದರು. ಜೀರ್ಣೋದ್ಧಾರ ಪ್ರಕ್ರಿಯೆ ವಿವರಗಳನ್ನು ನೀಡಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!