Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ಧರ್ಮಸ್ಥಳದಿಂದ ಮಾನವೀಯತೆಯ `ವಾತ್ಸಲ್ಯ'

ಧರ್ಮಸ್ಥಳದಿಂದ ಮಾನವೀಯತೆಯ `ವಾತ್ಸಲ್ಯ’

ಧರ್ಮಸ್ಥಳ: ರೋಗಿಗಳು, ನಿರ್ಗತಿಕರು, ಅಸಹಾಯಕರು, ವಿಧವೆಯರು ಹಾಗೂ ಬಡವರ ಕಷ್ಟಕಾರ್ಪಣ್ಯಗಳಿಗೆ ಮಾನವೀಯತೆಯಿಂದ ಸ್ಪಂದಿಸಿ ಸಕಾಲಿಕ ನೆರವು, ಮಾರ್ಗದರ್ಶನ ನೀಡಿ ಅವರ ದುಃಖ ನಿವಾರಿಸಿ ಶಾಂತಿ, ನೆಮ್ಮದಿಯ ಜೀವನ ನಡೆಸುವಂತೆ ಅಭಯ ನೀಡುವುದೇ ವಾತ್ಸಲ್ಯ ಕಾರ್ಯಕ್ರಮದ ಉದ್ದೇಶ ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಹೇಳಿದರು.
ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ `ವಾತ್ಸಲ್ಯ’ ಸಮಾಜ ಬಾಂಧವರಿಗೆ ಸಹಾಯ ಹಸ್ತ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಿಟ್ ವಿತರಿಸಿ ಮಾತನಾಡಿದರು.
ಯಾವುದೇ ವಸ್ತು ಅಥವಾ ಪ್ರಾಣಿಗೆ ಬೆಲೆ ಕಟ್ಟಬಹುದು. ಆದರೆ, ಮನುಷ್ಯನಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಬಡತನ ಎಂಬುದು ಶಾಪವಲ್ಲ, ಅವರವರ ಕರ್ಮ ಫಲವೂ ಅಲ್ಲ. ಸಹಾನುಭೂತಿಯಿಂದ ಮಾನವೀಯತೆಯೊಂದಿಗೆ ನೊಂದವರಿಗೆ ಅಭಯ ನೀಡಿ ನೆಮ್ಮದಿಯ ಜೀವನ ನಡೆಸಲು ನೆರವಾಗುವುದೇ ಮಾನವ ಧರ್ಮ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.

10 ಸಾವಿರ ಮನೆ ನಿರ್ಮಾಣ
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ರಾಜರ್ಷಿ ಪದ್ಮವಿಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆ, ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕಿಗೆ ಮಾರ್ಗದರ್ಶನ ನೀಡುವುದೇ ವಾತ್ಸಲ್ಯ ಯೋಜನೆಯ ಉದ್ದೇಶ. ಹಿರಿಯರು ಮಾತಿನಲ್ಲಿ ಶಾಪ ಕೊಡಬೇಕಾಗಿಲ್ಲ. ಮನದಲ್ಲಿ ನೊಂದು ಕಣ್ಣೀರು ಹಾಕಿದರೂ ಅವರ ಕಣ್ಣೀರೇ ಶಾಪವಾಗಿ ಪರಿಣಮಿಸುತ್ತದೆ. ಆಧುನಿಕ ಸಮಾಜದಲ್ಲಿ ನಿರ್ಗತಿಕರು,, ರೋಗಿಗಳು, ವೃದ್ಧರನ್ನು ಕಡೆಗಣಿಸುವುದು ಸಾಮಾನ್ಯವಾಗಿದೆ. ಇಳಿ ವಯಸ್ಸಿನಲ್ಲಿ ಅವರಿಗೆ ಅಭಯ ನೀಡಿ ಪ್ರೀತಿ ವಿಶ್ವಾಸದಿಂದ ಆರೈಕೆ ಮಾಡಿ ಶಾಂತಿ, ನೆಮ್ಮದಿಯ ಜೀವನ ನಡೆಸುವಂತೆ ಪ್ರೇರಣೆ ನೀಡುವುದೇ ವಾತ್ಸಲ್ಯ ಯೋಜನೆಯ ಆಶಯ ಎಂದರು.
ಶ್ರೀಕ್ಷೇತ್ರದ ವತಿಯಿಂದ ಈ ವರ್ಷ ನಿರ್ಗತಿಕರಿಗೆ 10 ಸಾವಿರ ಮನೆ ನಿರ್ಮಿಸಿಕೊಡಲಾಗುವುದು ಎಂದು ಡಾ| ಹೆಗ್ಗಡೆ ಪ್ರಕಟಿಸಿದರು.
ಡಿ. ಹರ್ಷೇಂದ್ರಕುಮಾರ್, ಡಾ. ಬಿ. ಯಶೋವರ್ಮ, ಸಂಪತ್ ಸಾಮ್ರಾಜ್ಯ ಶಿರ್ತಾಡಿ, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಬೆಂಗಳೂರಿನ ವಿ. ರಾಮಸ್ವಾಮಿ ಇದ್ದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್. ಎಚ್. ಮಂಜುನಾಥ್ ಸ್ವಾಗತಿಸಿದರು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಸ್ ವಂದಿಸಿದರು. ನಿರ್ದೇಶಕಿ ಮಮತಾ ರಾವ್ ನಿರೂಪಿಸಿದರು.

ಇಷ್ಟೆಲ್ಲಾ ಇದೆ ವಾತ್ಸಲ್ಯ ಯೋಜನೆಯಲ್ಲಿ!
ರಾಜ್ಯದಲ್ಲಿ 10,461 ಮಂದಿಗೆ ವಾರ್ಷಿಕ 8 ಕೋಟಿ ರೂ. ಮಾಸಾಶನ ವಿತರಣೆ
ಬುಧವಾರ ರಾಜ್ಯವ್ಯಾಪಿ ಏಕಕಾಲದಲ್ಲಿ ಒಂದು ಕೋಟಿ ರೂ. ವೆಚ್ಚದ 7,300 ಕಿಟ್ ವಿತರಣೆ.
ಅಡುಗೆ ಪಾತ್ರೆ, ಚಾಪೆ, ಹೊದಿಕೆ ಮೊದಲಾದ ಮೂಲಭೂತ ಆವಶ್ಯಕ ವಸ್ತುಗಳನ್ನೊಳಗೊಂಡ ಕಿಟ್ ಮನೆ ಬಾಗಿಲಿಗೆ ಒದಗಿಸುವುದು.
ಸ್ವಾವಲಂಬಿ ಹಾಗೂ ಸ್ವಾಭಿಮಾನಿಗಳಾಗಿ ಎಲ್ಲರೂ ನೆಮ್ಮದಿಯಿಂದ ಜೀವನ ನಡೆಸಬೇಕೆಂಬ ಆಶಯ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!