Tuesday, May 17, 2022
Home ಸಮಾಚಾರ ಅಪರಾಧ ಕೇಂದ್ರ ಪ್ರಾಯೋಜಿತ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸೂಚನೆ

ಕೇಂದ್ರ ಪ್ರಾಯೋಜಿತ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸೂಚನೆ

ಸುದ್ದಿಕಿರಣ ವರದಿ
ಶನಿವಾರ, ಮೇ 7

ಕೇಂದ್ರ ಪ್ರಾಯೋಜಿತ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸೂಚನೆ
ಉಡುಪಿ: ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರೊಂದಿಗೆ ಸಾರ್ವಜನಿಕ ಉಪಯೋಗಕ್ಕೆ ಅನುಕೂಲ ಮಾಡಿಕೊಡುವಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಧಿಕಾರಿಗಳಿಗೆ ಸೂಚಿಸಿದರು.

ಶನಿವಾರ ಜಿ. ಪಂ. ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗೆ 7 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದ್ದು, ಪ್ರಸ್ತುತ 9.25 ಲಕ್ಷ ಮಾನವ ದಿನಗಳ ಕೂಲಿ ಕಾರ್ಯ ಮಾಡುವುದರೊಂದಿಗೆ ಶೇ. 132.14ರಷ್ಟು ಗುರಿ ಸಾಧಿಸಲಾಗಿದೆ. ಈ ಅನುದಾನದಿಂದ ಕೆರೆ ಹೂಳೆತ್ತುವುದು, ಬಾವಿ ತೋಡುವುದು ಸೇರಿದಂತೆ ಮತ್ತಿತರ ಶಾಶ್ವತ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಪ್ರಧಾನಿಯ ಮಹಾತ್ವಾಕಾಂಕ್ಷಿ ಯೋಜನೆಯಾದ ಅಮೃತ್ ಸರೋವರ್ ನಡಿ 1 ಎಕರೆಗಿಂತ ಹೆಚ್ಚು ವಿಸ್ತೀರ್ಣವಿರುವ ಜಿಲ್ಲೆಯ 75 ಕೆರೆಗಳ ಅಭಿವೃದ್ಧಿಯನ್ನು ನರೇಗ, ಸಿ.ಎಸ್.ಆರ್ ನಿಧಿ ಸೇರಿದಂತೆ ಇತರ ಇಲಾಖೆಗಳ ಅನುದಾನ ಬಳಸಿ ಸಾರ್ವಜನಿಕರಿಗೆ ಬಳಕೆಯಾಗುವ ರೀತಿಯಲ್ಲಿ ಹೊಸ ಅಥವಾ ಪ್ರಸ್ತುತ ಇರುವ ಕೆರೆಗಳ ಅಭಿವೃದ್ಧಿ ಕೈಗೊಳ್ಳಲು ಸೂಚಿಸಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಆರ್ಥಿಕ ಸೌಲಭ್ಯ ಒದಗಿಸುವ ಸ್ವನಿಧಿ ಸಾಲವನ್ನು 50 ಸಾವಿರ ರೂ. ವರೆಗೆ ಹೆಚ್ಚಿಸಲಾಗಿದೆ. ನಗರ ಪ್ರದೇಶಗಳಲ್ಲಿ ಹೆಚ್ಚಾಗಿರುವ ಬೀದಿ ಬದಿ ವ್ಯಾಪಾರಿಗಳು ಅದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಕಳೆದ ಸಾಲಿನಲ್ಲಿ ಸ್ವನಿಧಿ ಯೋಜನೆಯಡಿ 3,500ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದು ಶೇ. 82ರಷ್ಟು ಸಾಧನೆ ಮಾಡಿದ್ದರು ಎಂದ ಅವರು, ಈ ಯೋಜನೆಯ ಅನುಷ್ಠಾನಕ್ಕೆ ಕೆಲವು ಖಾಸಗಿ ಬ್ಯಾಂಕುಗಳು ಸಹಕಾರ ನೀಡುತ್ತಿಲ್ಲ ಎಂಬ ದೂರು ಕೇಳಿಬರುತ್ತಿವೆ. ಅಂಥ ಬ್ಯಾಂಕುಗಳಲ್ಲಿ ಸರಕಾರದ ಹಣ ಠೇವಣಿ ಮಾಡಿದಲ್ಲಿ ಅದನ್ನು ವಾಪಾಸು ಪಡೆಯುವುದರ ಜೊತೆಗೆ ಕೇಂದ್ರ ಸರ್ಕಾರದ ಹಣಕಾಸು ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಎಚ್ಚರಿಸಿದರು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಕೃಷಿ ಮೂಲ ಸೌಕರ್ಯ ನಿಧಿಯಡಿ ದೇಶದಾದ್ಯಂತ 1 ಲಕ್ಷ ಕೋಟಿ ಅನುದಾನ ಮೀಸಲಿಡಲಾಗಿದೆ. ರಾಜ್ಯಕ್ಕೆ 14 ಸಾವಿರ ಕೋಟಿ ರೂ. ಬಿಡುಗಡೆಯಾಗಿದೆ. ಸ್ವಸಹಾಯ ಗುಂಪುಗಳು, ಖಾಸಗಿ ವ್ಯಕ್ತಿಗಳು ಅಥವಾ ಸಹಕಾರಿ ಸಂಘದವರಿಗೆ 2 ಕೋಟಿ ರೂ. ವರೆಗೆ ಶೇ. 3ರಷ್ಟು ಬಡ್ಡಿ ದರದಲ್ಲಿ ಆರ್ಥಿಕ ನೆರವು ನೀಡಿ ಪ್ರಯೋಗಾಲಯ, ಆಹಾರ ಸಂಸ್ಕರಣೆ ಘಟಕ, ಕೋಲ್ಡ್ ಸ್ಟೋರೇಜ್, ಮಣ್ಣು ಪರೀಕ್ಷಾ ಕೇಂದ್ರ, ಗೋದಾಮು ಮತ್ತಿತರ ಕೃಷಿ ಆಧರಿತ ಸೌಕರ್ಯ ನಿರ್ಮಿಸಬಹುದಾಗಿದೆ. ಕೃಷಿಗೆ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳನ್ನು ಈ ಯೋಜನೆಯಡಿ ಕೈಗೊಳ್ಳಲು ಜಿಲ್ಲಾ ಕೃಷಿ ಕ್ರಿಯಾ ಯೋಜನೆ ತಯಾರಿಸಲು ಸೂಚಿಸಿದರು.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಮೊದಲನೇ, ಎರಡನೇ ಹಾಗೂ ಮೂರನೇ ಹಂತದ 31 ರಸ್ತೆ ಕಾಮಗಾರಿಗಳನ್ನು 90.28 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಈಗಾಗಲೇ ಕೆಲವು ಕಾಮಗಾರಿ ಮುಗಿದಿವೆ. ಬಾಕಿ ಉಳಿದ ಕಾಮಗಾರಿಗಳನ್ನು ಮಳೆಗಾಲ ಪ್ರಾರಂಭಕ್ಕಿಂತ ಮುಂಚೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಒದಗಿಸುವ ಜಲ ಜೀವನ್ ಮಿಷನ್ ಯೋಜನೆಯಡಿ 1,09,765 ಹೊಸದಾಗಿ ನಳ್ಳಿ ಸಂಪರ್ಕ ಒದಗಿಸುವ ಕಾಮಗಾರಿ ಕೈಗೊಂಡು 41,711 ಮನೆಗಳಿಗೆ ಕುಡಿಯುವ ನೀರಿನ ನಳ್ಳಿ ಸಂಪರ್ಕ ಒದಗಿಸಲಾಗಿದೆ. ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾಗದ ಪ್ರತೀ ಮನೆಗೂ ನಳ್ಳಿ ಸಂಪರ್ಕವನ್ನು ಶೀಘ್ರವಾಗಿ ಕಲ್ಪಿಸಬೇಕು ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಶಯದಂತೆ ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯಕ್ಕನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತಿತರ ಇಲಾಖೆಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಹೆಚ್ಚಿಸಬೇಕು. ಇಲಾಖೆಗಳು ರೈತರಿಗೆ ಬೀಜ, ರಸಗೊಬ್ಬರ ಹಾಗೂ ಪರಿಕರ ನೀಡುವ ಕೆಲಸಕ್ಕೆ ಸೀಮಿವಾಗಬಾರದು ಎಂದರು.

ಜಿಲ್ಲೆಯಲ್ಲಿ ಮೀನುಗಾರರು ಕಷ್ಟಪಟ್ಟು ಮೀನು ಹಿಡಿಯುತ್ತಾರೆ. ಆದರೆ, ಅವರಿಗೆ ಉತ್ತಮ ಧಾರಣೆ ಸಿಗುವುದಿಲ್ಲ. ಪಕ್ಕದ ರಾಜ್ಯ ಕೇರಳದ ಕೊಚ್ಚಿನ್ ಮೂಲಕ ಮೀನು ವಿದೇಶಕ್ಕೆ ರಫ್ತಾಗುತ್ತಿದೆ. ಜಿಲ್ಲೆಯಿಂದಲೇ ಹೊರ ದೇಶಕ್ಕೆ ಮೀನು ರಫ್ತಾಗುವ ವ್ಯವಸ್ಥೆ ಕೈಗೊಳ್ಳುವಂತೆ ಮೀನುಗಾರಿಕೆ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಮಲೆನಾಡಿನ ಗ್ರಾಮೀಣ ಭಾಗಗಳಲ್ಲಿ ದೂರವಾಣಿ ಸೇರಿದಂತೆ ಮೊಬೈಲ್ ಸಂಪರ್ಕ ಸರಿಯಾಗಿ ಸಿಗುತ್ತಿಲ್ಲ ಎಂಬ ದೂರು ಪದೇ ಪದೇ ಕೇಳಿ ಬರುತ್ತಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯದಿಂದ ಈ ಸಮಸ್ಯೆ ಕಂಡುಬರುತ್ತಿದ್ದು, ಅದಕ್ಕೆ ಅಗತ್ಯವಿರುವ ಬ್ಯಾಟರಿ ವ್ಯವಸ್ಥೆ ಕಲ್ಪಿಸುವ ಜೊತೆಗೆ, ಮೆಸ್ಕಾಂ ಇಲಾಖೆ ವಿದ್ಯುತ್ ಸರಬರಾಜಿನ ವ್ಯತ್ಯಯವಾಗದಂತೆ ಎಚ್ಚರವಹಿಸಬೇಕು. ರಸ್ತೆ ಸೇರಿದಂತೆ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಾಗ ಮೊಬೈಲ್ ನೆಟ್ ವರ್ಕ್ ನ ಕೇಬಲ್ ಗಳು ಹಾಳಾಗುತ್ತಿವೆ.

ಹಾಗಾಗದಂತೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ, ಕಾಮಗಾರಿ ಕೈಗೊಳ್ಳಲು ಸೂಚಿಸಿದರು.

ಉಡುಪಿ ಹಾಗೂ ಕುಂದಾಪುರ ರೈಲ್ವೆ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳಾದ ರಸ್ತೆ, ಬೀದಿ ದೀಪ ಮತ್ತಿತರ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿಯ ಬಾಕಿ ಉಳಿದ ಕಾಮಗಾರಿ ಶೀಘ್ರದಲ್ಲಿ ಕೈಗೊಳ್ಳುವುದರೊಂದಿಗೆ ಹೆದ್ದಾರಿಗಳಲ್ಲಾಗುವ ಅಪಘಾತ ತಪ್ಪಿಸಬೇಕು. ಜಿಲ್ಲೆಯಲ್ಲಿ ಈಗಾಗಲೇ 30 ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಅಗತ್ಯವಿರುವ ರಸ್ತೆ ಸುರಕ್ಷತಾ ಕಾಮಗಾರಿ ಕೈಗೊಂಡು ಅಪಘಾತ ತಪ್ಪಿಸಬೇಕು ಎಂದ ಅವರು, ಕಟಪಾಡಿ ಮತ್ತು ಅಂಬಲಪಾಡಿಯಲ್ಲಿ ಮೇಲು ಸೇತುವೆ ನಿರ್ಮಾಣ, ಸಂತೆಕಟ್ಟೆಯಲ್ಲಿ ಸರ್ಕಲ್ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲು ಸೂಚಿಸಿದರು.

ಅರೋಗ್ಯ ಇಲಾಖೆ ಅಧಿಕಾರಿಗಳು ಸಂಭವನೀಯ ಕೋವಿಡ್ 4ನೇ ಅಲೆ ಎದುರಿಸಲು ಅಗತ್ಯವಿರುವ ಎಲ್ಲಾ ರೀತಿಯ ಸಿದ್ದತೆ ಕೈಗೊಳ್ಳಬೇಕು. ಜಿಲ್ಲೆಯಲ್ಲಿ 80ಕ್ಕೂ ಹೆಚ್ಚು ಜನೌಷಧಿ ಕೇಂದ್ರ ತೆರೆದು ಕಡಿಮೆ ವೆಚ್ಚದಲ್ಲಿ ಔಷಧಿ ನೀಡಲಾಗುತ್ತಿದೆ ಕ್ಯಾನ್ಸರ್ ಗೆ ಔಷಧಿ ಲಭಿಸಬೇಕೆಂಬ ಜನತೆಯ ಬೇಡಿಕೆ ಇದ್ದು, ಅದಕ್ಕೆ ಸ್ಪಂದಿಸುವುದಾಗಿ ತಿಳಿಸಿದರು.

ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಮಾತನಾಡಿ, ಬಡಜನರಿಗೆ ಸ್ವಂತ ಸೂರು ಕಲ್ಪಿಸಬೇಕೆಂದು ಪ್ರಧಾನಮಂತ್ರಿ ರಾಷ್ಟ್ರೀಯ ಆಶ್ರಯ ಯೋಜನೆಯಡಿ ಅನುದಾನ ನೀಡಲಾಗುತ್ತಿದೆ. ಆದರೆ, ಶೇ. 45.99ರಷ್ಟು ಮಾತ್ರ ಪ್ರಗತಿಯಾಗಿದೆ. ಕೆಲವರು ಸರ್ಕಾರದ ಅನುದಾನ ವೈಯಕ್ತಿಕವಾಗಿ ಬಳಸಿಕೊಂಡು ಮನೆ ನಿರ್ಮಾಣ ಮಾಡದೇ ಇರುವುದು ಕಂಡುಬರುತ್ತಿದೆ. ಅವುಗಳ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಿ, ಗೃಹ ನಿರ್ಮಾಣ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಶಾಸಕರಾದ ಸುಕುಮಾರ ಶೆಟ್ಟಿ ಮತ್ತು ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!