Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಜಿಲ್ಲಾ ನ್ಯಾಯಾಧೀಶರ ದಿಢೀರ್ ಭೇಟಿ

ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಜಿಲ್ಲಾ ನ್ಯಾಯಾಧೀಶರ ದಿಢೀರ್ ಭೇಟಿ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 15

ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಜಿಲ್ಲಾ ನ್ಯಾಯಾಧೀಶರ ದಿಢೀರ್ ಭೇಟಿ
ಉಡುಪಿ: ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಶುಕ್ರವಾರ ಇಲ್ಲಿನ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆ ಸಮಸ್ಯೆ ಕುರಿತು ವೈದ್ಯಾಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ನ್ಯಾಯಾಧೀಶರು ಔಷಧಾಲಯ, ಪ್ರಯೋಗಾಲಯ ಹಾಗೂ ವಾರ್ಡ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ಆಸ್ಪತ್ರೆಯ ಸೌಲಭ್ಯಗಳ ಕುರಿತು ನ್ಯಾಯಾಧೀಶರಿಗೆ ಮಾಹಿತಿ ನೀಡಿದರು.

ಕಟ್ಟಡ ನಿರ್ಮಾಣದಲ್ಲಿ ದೋಷ
ಬಳಿಕ ಮಾತನಾಡಿದ ನ್ಯಾಯಾಧೀಶರು, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸೂಚನೆಯಂತೆ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಆಸ್ಪತ್ರೆಯ ಒಪಿಡಿ, ಜನರಲ್ ವಾರ್ಡ್‌, ಮಕ್ಕಳ ವಾರ್ಡ್‌, ಐಸಿಯುನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿವೆ.

ಆದರೆ, ಕಟ್ಟಡ ನಿರ್ಮಾಣದಲ್ಲಿ ದೋಷವಿರುವಂತೆ ಕಾಣುತ್ತಿದ್ದು ಮಳೆ ನೀರು ಅಲ್ಲಲ್ಲಿ ಸೋರಿಕೆಯಾಗುತ್ತಿದೆ. ಗೋಡೆಯಲ್ಲಿ ಫಂಗಸ್ ಕಾಣಿಸಿಕೊಂಡಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶೀಘ್ರ ದುರಸ್ತಿ ಮಾಡುವ ಭರವಸೆ ನೀಡಿದ್ದಾರೆ ಎಂದರು.

ಆಸ್ಪತ್ರೆಯ ಸ್ಥಿತಿಗತಿ ಕುರಿತು ಶೀಘ್ರ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು.

ಸರ್ಕಾರವೇ ನಿರ್ವಹಣೆ
ಜಿಲ್ಲಾ ಸರ್ಜನ್‌ ಡಾ.ಮಧುಸೂದನ್ ನಾಯಕ್ ಮಾತನಾಡಿ, ನ್ಯಾಯಾಧೀಶರು ಆಸ್ಪತ್ರೆ ಎಲ್ಲ ವಿಭಾಗಗಳಿಗೆ ಭೇಟಿನೀಡಿ ಪರಿಶೀಲಿಸಿದ್ದಾರೆ. ಆಸ್ಪತ್ರೆಯ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಗಿದೆ. ಬಿಆರ್‌ಎಸ್‌ ಹೆಲ್ತ್ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಆಸ್ಪತ್ರೆ ನಿರ್ವಹಣೆಯನ್ನು ಕಳೆದ ಮೇ 31ರಿಂದ ನಿಲ್ಲಿಸಿದ್ದು, ಸರ್ಕಾರವೇ ನಿರ್ವಹಣೆ ಮಾಡುತ್ತಿದೆ ಎಂದರು.

ಸಿಬಂದಿ ಕೊರತೆ
ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇಲ್ಲ ಆದರೆ, ಸಿಬ್ಬಂದಿ ಕೊರತೆ ಇದೆ. ಸಮಸ್ಯೆ ನಿವಾರಣೆಯಾದಲ್ಲಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಸಿಗಲಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಎಸ್‌. ಶರ್ಮಿಳಾ, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ವಳಕಾಡು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!