Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ಮೋದಿಯನ್ನು ಟೀಕಿಸಿದರೆ ಒಳ್ಳೆಯದಾಗುವುದಿಲ್ಲ

ಮೋದಿಯನ್ನು ಟೀಕಿಸಿದರೆ ಒಳ್ಳೆಯದಾಗುವುದಿಲ್ಲ

ಉಡುಪಿ: ದೇಶದ ಸುಮಾರು 80 ಕೋಟಿ ಮಂದಿಗೆ ಉಚಿತ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಯಾರಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ವ್ಯಾಕ್ಸಿನ್ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದರೆ ಒಳ್ಳೆಯದಾಗುವುದಿಲ್ಲ ಎಂದು ಸಣ್ಣ ನೀರಾವರಿ ಸಚಿವ ಜೆ. ಸಿ. ಮಾಧುಸ್ವಾಮಿ ಎಚ್ಚರಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಲಸಿಕೆ ಬೋಗಸ್ ಎಂಬ ಡಿ. ಕೆ. ಶಿವಕುಮಾರ್ ಆರೋಪಕ್ಕೆ ಮಾತಿನ ಚಾಟಿ ಬೀಸಿದರು.

ಲಸಿಕೆಗಾಗಿ ರಾಜ್ಯ ಸರ್ಕಾರ 2 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಡಿ. ಕೆ. ಶಿವಕುಮಾರ್ ಪಾಪದ ಮಾತಿನಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ಟೀಕೆ ಮಾಡಿ, ಅದು ನಿಮ್ಮ ಕರ್ತವ್ಯ. ವಿರೋಧ ಪಕ್ಷದಲ್ಲಿ ನನಗಿಂತ ಚೆನ್ನಾಗಿ ಕೆಲಸ ಮಾಡಿದವರು ಯಾರೂ ಇಲ್ಲ ಎಂದ ಸಚಿವ ಮಾಧುಸ್ವಾಮಿ, ನೈಸರ್ಗಿಕ ಆಪತ್ತಿನ ಕಾಲದಲ್ಲಿ ಎಲ್ಲವನ್ನೂ ಟೀಕಿಸಬಾರದು ಎಂದರು.

ವ್ಯಾಕ್ಸಿನ್ ಉತ್ಪಾದನೆ ಮಾಡಲು ಕಂಪೆನಿಯವರಿಗೂ ಕಾಲಾವಕಾಶ ಬೇಕು. ಮುಂದಿನ 3 ತಿಂಗಳಲ್ಲಿ ರಾಜ್ಯದಲ್ಲಿ ಲಸಿಕೆ ಅಭಿಯಾನ ಮುಗಿಯುತ್ತದೆ. ಇದು ಡಿಕೆಶಿ ಬದುಕಿನ ಪ್ರಶ್ನೆ ಆಗಿರುವುದರಿಂದ ವಿರೋಧ ಮಾಡುತ್ತಾರೆ ಎಂದು ವ್ಯಂಗವಾಡಿದರು.

ಕಾಂಗ್ರೆಸ್ ತೊರೆದವರು ಮತ್ತೆ ಪಕ್ಷಕ್ಕೆ ಬರುವುದಾದರೆ ಸ್ವಾಗತ ಎಂದಿರುವ ಡಿ.ಕೆ.ಶಿ. ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಬಿಜೆಪಿಗೆ ಯಾರಾದರೂ ಬರುವುದಿದ್ದರೆ ಬರಲಿ. ಬೇರೆ ಪಕ್ಷದಿಂದ ಬಿಜೆಪಿಗೆ ಬರುವುದಾದರೂ ಸ್ವಾಗತ. ವಿಸ್ತರಣೆ ರಾಜಕೀಯ ಎಲ್ಲ ಪಕ್ಷಗಳ ಉದ್ದೇಶ ಆಗಿದೆ. ಕಾಂಗ್ರೆಸ್ ನಿಂದ ಯಾರಾದರೂ ಬರುವವರಿದ್ದರೂ ನಾವು ಸ್ವಾಗತಿಸುತ್ತೇವೆ ಎಂದರು.

ರಮೇಶ್ ಜಾರಕಿಹೊಳಿ ಅವರಿಗೆ ಸರ್ಕಾರ ಮತ್ತು ಪಕ್ಷದ ಕಡೆಯಿಂದ ಏನು ತೊಂದರೆ ಮಾಡಿಲ್ಲ. ಆಕಸ್ಮಿಕವಾದ ಘಟನೆಗೆ ಅವರು ಬಲಿಯಾಗಿದ್ದಾರೆ ಅಷ್ಟೇ. ನಾವೆಲ್ಲ ಅವರ ಬಗ್ಗೆ ಅನುಕಂಪ ಇಟ್ಟುಕೊಂಡಿದ್ದೇವೆ. ಇದೊಂದು ಕಾನೂನಾತ್ಮಕ ಮತ್ತು ನೈತಿಕ ವಿಚಾರ. ನೈತಿಕವಾಗಿ ಹೊಣೆ ಹೊತ್ತು ಅವರು ರಾಜೀನಾಮೆ ನೀಡಿದ್ದಾರೆ.

ಕಾನೂನಾತ್ಮಕವಾಗಿಯೂ ಯಾವುದೇ ಸಮಸ್ಯೆ ಇದೆ ಅನ್ನಿಸುವುದಿಲ್ಲ. ಸಮ್ಮತಿಯಿಂದ ನಡೆದ ದೈಹಿಕ ಸಂಪರ್ಕ ಅಪರಾಧ ಅಲ್ಲ. ಹೀಗೆಂದು ಸುಪ್ರೀಂ ಕೋರ್ಟ್ ಹೇಳಿದೆ. ಆ ಹೆಣ್ಣುಮಗಳ ವರ್ತನೆ ನೋಡಿದರೆ ಇಚ್ಛೆಪಟ್ಟು ಹೋಗಿದ್ದಾರೆ ಎನ್ನುವ ಭಾವನೆ ಬರುತ್ತದೆ. ಹಾಗಾಗಿ ಜಾರಕಿಹೊಳಿಗೆ ಶಿಕ್ಷೆ ಆಗಲಾರದು ಅನಿಸುತ್ತದೆ. ಎಲ್ಲವನ್ನೂ ಎದುರಿಸಲೇಬೇಕು. ನ್ಯಾಯಾಲಯದಲ್ಲಿ ಪ್ರಕರಣ ಇದ್ದಾಗ ಯಾರನ್ನೂ ದೂರಲು ಸಾಧ್ಯವಿಲ್ಲ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿಲ್ಲ ಎಂದು ಸಚಿವ ಮಾಧುಸ್ವಾಮಿ ಪ್ರತಿಪಾದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!