Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ `ಆರೋಪಗಳಿಗೆ ತಲೆಗೆಡಿಸಿಕೊಳ್ಳಬೇಡಿ'

`ಆರೋಪಗಳಿಗೆ ತಲೆಗೆಡಿಸಿಕೊಳ್ಳಬೇಡಿ’

ಉಡುಪಿ: ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ 6 ಕೋ. ರೂ. ವೆಚ್ಚದ ಮನೆ ಕಟ್ಟಿಸುತ್ತಿದ್ದಾರೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿನ ಆರೋಪ ಹಿನ್ನೆಲೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಇದೆಲ್ಲಾ ಕಾಮನ್. ಯು ಡೋಂಟ್ ವರಿ. ಇಂಥ ಆರೋಪಗಳಿಗೆ ತಲೆಗೆಡಿಕೊಳ್ಳಬೇಡಿ ಎಂದು ಧೈರ್ಯ ತುಂಬಿದ್ದಾರೆ.

ಶಾಸಕ, ಮಂತ್ರಿಯಾದವರು ಮನೆ ಕಟ್ಟುವುದು ಅಪರಾಧವಲ್ಲ. ಭ್ರಷ್ಟಾಚಾರ ಮತ್ತು ಅವ್ಯವಹಾರ ಮಾಡಿದಲ್ಲಿ ಅದು ಅಪರಾಧ. ಮನೆಯ ಚಿತ್ರ ನೋಡುವಾಗಲೇ ಅದು ಸುಮಾರು 60 ಲಕ್ಷದ ಮನೆ ಎಂದು ತಿಳಿಯುತ್ತದೆ. ಮನೆ ಪೂರ್ತಿ ಆಗುವಾಗ ಸುಮಾರು 80 ಲಕ್ಷ ರೂ. ಆಗಬಹುದು.

ಮೂರು ಅವಧಿಗೆ ಶಾಸಕರಾಗಿ ಆಯ್ಕೆಯಾದ ಶ್ರೀನಿವಾಸ ಪೂಜಾರಿ ಅವರಿಗೆ ಸಂಭಾವನೆ, ಹಲವಾರು ಭತ್ಯೆಗಳು ಬರುತ್ತಿಲ್ಲವೇ ಎಂದು ಭಟ್ ಪ್ರಶ್ನಿಸಿದ್ದಾರೆ.

ಬಂಗಲೆ ಕಟ್ಟಲು ಹೊರಟಿಲ್ಲ
ಕೋಟ ಶ್ರೀನಿವಾಸ ಪೂಜಾರಿ ದೊಡ್ಡ ಬಂಗಲೆಯನ್ನು ಕಟ್ಟಿಸುತ್ತಿಲ್ಲ. ಬೇರೆ ನಾಯಕರಂತೆ 50 ಕೋಟಿ ವೆಚ್ಚದ ಮನೆ ಕಟ್ಟಲು ಹೊರಟಿಲ್ಲ ಎಂದು ಕೋಟಿ ಮನೆಯೊಡೆಯರು, ವಿರೋಧಿಗಳಿಗೆ ಕುಟುಕಿದ ಶಾಸಕ ಭಟ್, ತನ್ನ ಸ್ವಂತ ಜಮೀನಿನಲ್ಲಿ ಹಲವು ವರ್ಷದ ಹೋರಾಟ ಮಾಡಿ, ಕನಸಿನ ಮನೆ ಕಟ್ಟುತ್ತಿದ್ದಾರೆ.

ರಾಜಕಾರಣದಲ್ಲಿ ಇಂಥ ಅಪಪ್ರಚಾರ ಸಾಮಾನ್ಯ. ಅದನ್ನೆಲ್ಲ ನಮ್ಮ ಜನ ನಂಬುವುದಿಲ್ಲ, ನಿಮ್ಮ ಮತದಾರರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಭಟ್ ಹೇಳಿದ್ದಾರೆ.

ಮಂತ್ರಿ ಮಂಡಲ ವಿಸ್ತರಣೆ ಸಂದರ್ಭದಲ್ಲಿ ಇಂಥದೆಲ್ಲ ಸಾಮಾನ್ಯ. ಪೂಜಾರಿಯವರ ವಿರೋಧಿಗಳು, ಕಾಂಗ್ರೆಸ್ ನವರು ಫೋಟೊ- ಬರಹ ಬಿಟ್ಟಿರಬಹುದು.

ರಾಜಕೀಯಕ್ಕೆ ಬಂದ ಮೇಲೆ ಬೇಸರದ ನರವನ್ನೇ ಕಟ್ ಮಾಡಿಕೊಳ್ಳಬೇಕು. ನನ್ನ ರಾಜಕೀಯ ಜೀವನದಲ್ಲಿ ಇಂಥ ಅನೇಕ ಘಟನೆಗಳನ್ನು, ಹಲವು ಏರುಪೇರುಗಳನ್ನು ಕಂಡಿದ್ದೇನೆ. ಎಲ್ಲವನ್ನೂ ದಿಟ್ಟತನದಿಂದ ಎದುರಿಸಿ ಎಂದು ಅನುಭವಿ ಶಾಸಕ ರಘುಪತಿ ಭಟ್ ಅವರು ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಲಹೆ ನೀಡಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!