Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಮಣಿಪಾಲ ಸಿಂಡಿಕೇಟ್ ವೃತ್ತ- ಜಿಲ್ಲಾಧಿಕಾರಿ ಕಚೇರಿ ಮುಖ್ಯ ರಸ್ತೆಗೆ ಡಾ. ವಿ. ಎಸ್. ಆಚಾರ್ಯ ಹೆಸರು

ಮಣಿಪಾಲ ಸಿಂಡಿಕೇಟ್ ವೃತ್ತ- ಜಿಲ್ಲಾಧಿಕಾರಿ ಕಚೇರಿ ಮುಖ್ಯ ರಸ್ತೆಗೆ ಡಾ. ವಿ. ಎಸ್. ಆಚಾರ್ಯ ಹೆಸರು

ಆತ್ಮೀಯ ಓದುಗರೇ,
ಕೋವಿಡ್ ಅನ್ ಲಾಕ್ ಹೇಳಿಲ್ಲ; ಹೇಳಿದ್ದು ಸರ್ಕಾರ. ಇನ್ನೂ ಸಂಪೂರ್ಣ ಕೊರೊನಾ ತೊಲಗಿಲ್ಲ. ಹಾಗಾಗಿ ಸ್ವಚ್ಛತೆ ಕಾಪಾಡಿ, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಿ. ನೀವು ಸುರಕ್ಷಿತವಿರಿ, ಅನ್ಯರೂ ಸುರಕ್ಷಿತರಾಗಿರಲಿ. ಕೊರೊನಾದಿಂದ ರಕ್ಷಣೆ ನಮ್ಮ ಕೈಯ್ಯಲ್ಲೇ ಇದೆ. ಅಲ್ಲವೇ?
********************************

(ಸುದ್ದಿಕಿರಣ ವರದಿ)

ಮಣಿಪಾಲ, ಜು. 6: ಇಲ್ಲಿನ ಸಿಂಡಿಕೇಟ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗಿನ ರಸ್ತೆಗೆ ಡಾ. ವಿ. ಎಸ್. ಆಚಾರ್ಯ ರಸ್ತೆ ಎಂಬ ಹೆಸರನ್ನು ಡಾ. ಆಚಾರ್ಯರ ಜನ್ಮದಿನವಾದ ಇಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಘೋಷಣೆ ಮಾಡಿ, ನಾಮಫಲಕ ಅನಾವರಣಗೊಳಿಸಿದರು.
ಬಳಿಕ ಮಾತನಾಡಿದ ಅವರು, ಮೇರು ವ್ಯಕ್ತಿತ್ವದ ಡಾ. ವಿ. ಎಸ್. ಆಚಾರ್ಯ ಅವರಲ್ಲಿ ಪಕ್ಷ ನಿಷ್ಠೆ, ಪಕ್ಷ ಸಂಘಟನೆ ಮತ್ತು ಪಕ್ಷಕ್ಕಾಗಿ ಬದ್ಧತೆ ಮೊದಲಾದ ಗುಣಗಳನ್ನು ಕಾಣಬಹುದಾಗಿತ್ತು. ನಾನು ಅವರನ್ನು ಹತ್ತಿರದಿಂದ ಬಲ್ಲವನಾಗಿದ್ದೆ ಎಂದು ಬಣ್ಣಿಸಿದರು.

ಜನಸಂಘದಿಂದ ಆರಂಭಿಸಿ ಬಿಜೆಪಿ ವರೆಗೆ ಈ ಭಾಗದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಡಾ. ಆಚಾರ್ಯ, ಪುರಸಭೆಯ ಅಧ್ಯಕ್ಷತೆಯಿಂದ ರಾಜ್ಯ ಗೃಹಸಚಿವ ಸ್ಥಾನದ ವರೆಗೆ ಅಧಿಕಾರ ಪಡೆದ ಮುತ್ಸದ್ಧಿ ರಾಜಕಾರಣಿ. ಹಿರಿಯ ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರು ಡಾ. ಆಚಾರ್ಯ ಅವರನ್ನು ಸದಾ ಸ್ಮರಿಸುತ್ತಿದ್ದರು ಎಂದರು.

ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಡಾ. ಆಚಾರ್ಯ, ತಾನು ನಿರ್ವಹಿಸಿದ ಎಲ್ಲ ಇಲಾಖೆಗಳನ್ನು ವ್ಯವಸ್ಥಿತವಾಗಿ ನಿಭಾಯಿಸಿದ್ದರು. ಆರ್ಥಿಕ ಇಲಾಖೆಯೂ ಸೇರಿದಂತೆ ವಿವಿಧ ಇಲಾಖೆಗಳ ಕ್ಲಿಷ್ಟಕರ ಸಮಸ್ಯೆಗಳನ್ನು ಅತ್ಯಂತ ಜಾಣ್ಮೆಯಿಂದ ಪರಿಹರಿಸಿ, ಮುಖ್ಯಮಂತ್ರಿಗೆ ಸೂಕ್ತ ಪರಿಹಾರ ನೀಡುತ್ತಿದ್ದರು ಎಂದು ಸ್ಮರಿಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರಿನ ಡಾ. ಆಚಾರ್ಯ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಶಾಸಕ ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಕೊಳ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ, ವೀಣಾ ಶೆಟ್ಟಿ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿ ಜಿ. ಜಗದೀಶ್, ನಗರಸಭೆ ಪೌರಾಯುಕ್ತ ಉದಯಕುಮಾರ್, ಡಾ. ಆಚಾರ್ಯರ ಪುತ್ರರಾದ ಡಾ. ರವಿರಾಜ ಆಚಾರ್ಯ ಮತ್ತು ಡಾ. ಕಿರಣ್ ಆಚಾರ್ಯ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!