ಸುದ್ದಿಕಿರಣ ವರದಿ
ಗುರುವಾರ, ಜೂನ್ 16
ಜೂ. 19ರಂದು ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ ದಂಗೆ- 1837 ನಾಟಕ ಪ್ರದರ್ಶನ
ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಮತ್ತು ಯಕ್ಷ ರಂಗಾಯಣ ಕಾರ್ಕಳ ಸಹಯೋಗದೊಂದಿಗೆ ಈ ತಿಂಗಳ 19ರಂದು ಕಾರ್ಕಳದಲ್ಲಿ ಯಕ್ಷ ರಂಗಾಯಣದ ಚೊಚ್ಚಲ ನಾಟಕ ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ ದಂಗೆ- 1837 ಪ್ರದರ್ಶನಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಸಹಾಯಕ ನಿರ್ದೇಶಕಿ ಹಾಗೂ ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿಪೂರ್ಣಿಮಾ ತಿಳಿಸಿದರು.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಸಂಜೆ 6 ಗಂಟೆಗೆ ಕಾರ್ಕಳ ಭುವನೇಂದ್ರ ಕಾಲೇಜು ಸಭಾಂಗಣದಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಂಗವಾಗಿ ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಕರ್ನಾಟಕದ 6ನೇ ರಂಗಾಯಣ, ಕಾರ್ಕಳದಲ್ಲಿ ಸ್ಥಾಪಿಸಲ್ಪಟ್ಟ ಯಕ್ಷ ರಂಗಾಯಣ ಕಲಾವಿದರು ಅಭಿನಯಿಸುವ, ಯಕ್ಷ ರಂಗಾಯಣ ನಿರ್ದೇಶಕ ಜೀವನ್ ರಾಂ ಸುಳ್ಯ ನಿರ್ದೇಶನದ ಚೊಚ್ಚಲ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಖಾತೆ ಸಚಿವ ವಿ. ಸುನಿಲ್ ಕುಮಾರ್ ಉದ್ಘಾಟಿಸುವರು. ಹಿರಿಯ ಸಾಹಿತಿ ಹಾಗೂ ನಾಟಕದ ಕರ್ತೃ ಡಾ| ಪ್ರಭಾಕರ ಶಿಶಿಲ ಕರಾವಳಿ ಸ್ವಾತಂತ್ರ್ಯ ಹೋರಾಟದ ನೆನಪು ವಿಷಯವಾಗಿ ಮಾತಾಡಲಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲಸಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಹಾಗೂ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜು ಪ್ರಾಂಶುಪಾಲ ಡಾ| ಮಂಜುನಾಥ ಎ. ಕೋಟ್ಯಾನ್ ಅಭ್ಯಾಗತರಾಗಿ ಆಗಮಿಸುವರು ಎಂದು ಜೀವನರಾಂ ಸುಳ್ಯ ತಿಳಿಸಿದರು.
ಕಾರ್ಯಕ್ರಮ ಸಮಯಕ್ಕೆ ಸರಿಯಾಗಿ ಆರಂಭವಾಗಲಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ.
ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಯಕ್ಷ ರಂಗಾಯಣದ ರಂಗ ಪಯಣ
ಯಕ್ಷ ರಂಗಾಯಣದಿಂದ ಸಿದ್ಧಗೊಂಡ ಮೊದಲ ಪ್ರಯೋಗ ಮತ್ತು ಪ್ರಥಮ ಪ್ರದರ್ಶನ ಕಾಣಲಿರುವ ‘ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ ದಂಗೆ- 1837’ ನಾಟಕವನ್ನು ಮುಂದಿನ ದಿನಗಳಲ್ಲಿ ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ನೆಲದಲ್ಲಿ ಪ್ರದರ್ಶನ ನೀಡಲು ತನ್ನ ರಂಗ ಪಯಣ ಶೀಘ್ರದಲ್ಲಿ ಆರಂಭಿಸಲಿದೆ.
ತಂಡದಲ್ಲಿ ನೀನಾಸಂ ರಂಗ ಪದವೀಧರರು ಸೇರಿದಂತೆ ಒಟ್ಟು 15 ಮಂದಿ ಕಲಾವಿದರಿದ್ದಾರೆ. ರಂಗ ನಟರ ಪರಿಣಾಮಕಾರಿ ಅಭಿನಯ, ಸ್ಪಷ್ಟ ಶಕ್ತಿಯುತ ಮಾತುಗಾರಿಕೆ, 1837ನ್ನು ನೆನಪಿಸುವ ವಿಶೇಷ ವಸ್ತ್ರ ವಿನ್ಯಾಸ, ರಂಗ ಸಜ್ಜಿಕೆ, ರಂಗ ಪರಿಕರ ಹಾಗೂ ತ್ವರಿತ ಗತಿಯ ದೃಶ್ಯಗಳಿಂದ ಕಟ್ಟಲ್ಪಟ್ಟ ಈ ನಾಟಕ ನೋಡುಗರನ್ನು .ಪ್ರತಿಕ್ಷಣವೂ ಬೆರಗುಗೊಳಿಸಲಿದೆ ಎಂದು ಜೀವನರಾಂ ಮಾಹಿತಿ ನೀಡಿದರು