Saturday, August 13, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ 15ನೇ ರಾಷ್ಟ್ರಪತಿಯಾಗಿ ಮುರ್ಮು ಪದಗ್ರಹಣ

15ನೇ ರಾಷ್ಟ್ರಪತಿಯಾಗಿ ಮುರ್ಮು ಪದಗ್ರಹಣ

ಸುದ್ದಿಕಿರಣ ವರದಿ
ಸೋಮವಾರ, ಜುಲೈ 25

15ನೇ ರಾಷ್ಟ್ರಪತಿಯಾಗಿ ಮುರ್ಮು ಪದಗ್ರಹಣ
ನವದೆಹಲಿ: ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಸಂಸತ್ ನ ಸೆಂಟ್ರಲ್ ಹಾಲ್ ನಲ್ಲಿ ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಪ್ರಮಾಣ ವಚನ ಬೋಧಿಸಿದರು.

ಬಳಿಕ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ದೂರ ಪ್ರದೇಶದ ಬಡ ಮಹಿಳೆಯೊಬ್ಬರು ರಾಷ್ಟ್ರಪತಿಯಾಗುತ್ತಿರುವುದು ಭಾರತದ ಪ್ರಜಾಪ್ರಭುತ್ವದ ಸೊಬಗು. ತಳಮಟ್ಟದ ಜನರ ಬೆಳವಣಿಗೆಗಾಗಿ, ಸಮಾಜದ ಅಂಚಿನಲ್ಲಿರುವವರ ಉನ್ನತಿಗಾಗಿ, ಮಹಿಳೆಯರು ಮತ್ತು ಯುವಜನರ ಸಬಲೀಕರಣಕ್ಕಾಗಿ ಕೆಲಸ ಮಾಡುವ ತನ್ನ ಸಂಕಲ್ಪವನ್ನು ಹೊಂದಿರುವುದಾಗಿ ರಾಷ್ಟ್ರಪತಿ ಮುರ್ಮು ಪುನರುಚ್ಚರಿಸಿದರು.

ಕಳೆದ ಕೆಲವು ವರ್ಷಗಳಲ್ಲಿ ಮಹಿಳಾ ಸಬಲೀಕರಣಕ್ಕಾಗಿ ತೆಗೆದುಕೊಂಡ ನಿರ್ಧಾರಗಳು ಮತ್ತು ರೂಪಿಸಿದ ನೀತಿಗಳಿಂದಾಗಿ ದೇಶದಲ್ಲಿ ಹೊಸ ಶಕ್ತಿ ತುಂಬಿದೆ ಎಂದ ಅವರು, ನವ ಭಾರತದ ಚೈತನ್ಯ ಮತ್ತು ಜಾಗತಿಕವಾಗಿ ದೇಶದ ನಾಯಕತ್ವದ ಸ್ಥಾನ ವಹಿಸುತ್ತಿರುವುದು ಶ್ಲಾಘನೀಯ ಎಂದರು.

ವೈವಿಧ್ಯತೆಗಳಿಂದ ಕೂಡಿದ ಭಾರತ ದೇಶ ಹಲವು ಭಾಷೆಗಳು, ಧರ್ಮಗಳು, ಪಂಥಗಳು, ಆಹಾರ ಪದ್ಧತಿ, ಜೀವನ ಶೈಲಿಗಳನ್ನು ಅಳವಡಿಸಿಕೊಳ್ಳುವ ಮೂಲಕ `ಏಕ್ ಭಾರತ್- ಶ್ರೇಷ್ಠ ಭಾರತ್’ ಪರಿಕಲ್ಪನೆ ಸಾಕಾರಗೊಂಡಿದೆ. ಸ್ವಾತಂತ್ರ್ಯದ 75ನೇ ವರ್ಷದಿಂದ ಪ್ರಾರಂಭವಾಗುವ ಅಮೃತಕಾಲ್ ಭಾರತಕ್ಕೆ ಹೊಸ ಸಂಕಲ್ಪಗಳ ಅವಧಿಯಾಗಿದೆ ಎಂದರು.

ರಾಷ್ಟ್ರಪತಿ ಮುರ್ಮು ಪ್ರಮಾಣವಚನ ಸ್ವೀಕರಿಸುವ ಮುನ್ನ ರಾಷ್ಟ್ರ ರಾಜಧಾನಿಯ ರಾಜ್ ಘಾಟ್ ನಲ್ಲಿ ಗೌರವ ಸಲ್ಲಿಸಿದರು. ಆ ನಂತರ ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಅವರ ಪತ್ನಿ ಸವಿತಾ ಅವರು ರಾಷ್ಟ್ರಪತಿ ಭವನದಲ್ಲಿ ಮುರ್ಮು ಅವರಿಗೆ ಶುಭಾಶಯ ಕೋರಿದರು. ನಂತರ ವಿಧ್ಯುಕ್ತ ಮೆರವಣಿಗೆಯಲ್ಲಿ ಸೆಂಟ್ರಲ್ ಹಾಲ್ ತಲುಪಿದರು.

ರಾಜ್ಯಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ರಾಜತಾಂತ್ರಿಕ ನಿಯೋಗಗಳ ಮುಖ್ಯಸ್ಥರು, ಸಂಸದರು, ಮತ್ತು ಭಾರತ ಸರ್ಕಾರದ ಪ್ರಧಾನ ಸಿವಿಲ್ ಮತ್ತು ಮಿಲಿಟರಿ ಅಧಿಕಾರಿಗಳು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ್ದರು.

64ರ ಹರೆಯದ ದ್ರೌಪದಿ ಮುರ್ಮು ದೇಶದ ಅತ್ಯಂತ ಕಿರಿಯ ರಾಷ್ಟ್ರಪತಿಯಾಗಿದ್ದಾರೆ. ಅವರು ಸ್ವಾತಂತ್ರ್ಯಾ ನಂತರ ಜನಿಸಿದ ಭಾರತದ ಮೊದಲ ರಾಷ್ಟ್ರಪತಿಯೂ ಆಗಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!