Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸಲು ಕ್ರಮ

ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸಲು ಕ್ರಮ

ಉಡುಪಿ: ರಾಜ್ಯದ ನಗರ ಸಾರಿಗೆಯಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸುವ ನಿಟ್ಟಿನಲ್ಲಿ ಈಗಾಗಲೇ ಬೆಂಗಳೂರಿನಲ್ಲಿ 350 ಎಲೆಕ್ಟ್ರಿಕ್ ಬಸ್ ಗಳನ್ನು ಗುತ್ತಿಗೆ (ಲೀಸ್)ಗೆ ಪಡೆದು ಓಡಾಟ ಆರಂಭಿಸಲು ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಬೆಂಗಳೂರಿನಲ್ಲಿ ಫೆಬ್ರವರಿಯಲ್ಲಿ ಪ್ರಾಯೋಗಿಕವಾಗಿ ಸಂಚಾರ ಆರಂಭಗೊಳ್ಳಲಿದೆ ಎಂದು ರಾಜ್ಯ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

ಸುಮಾರು 395 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರ, ಮಾಲಿನ್ಯ ಹೆಚ್ಚಿರುವ ದೇಶದ ಪ್ರಮುಖ ನಗರಗಳಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಎಲೆಕ್ಟ್ರಿಕ್ ಬಸ್ ಬಳಸಲು ಪ್ರೋತ್ಸಾಹ ನೀಡುತ್ತಿದೆ. ಅದಕ್ಕಾಗಿ ಬಸ್ ಖರೀದಿಗೆ 55 ಲಕ್ಷ ರೂ. ಸಬ್ಸಿಡಿ ನೀಡಲಿದೆ. ಅಂತೆಯೇ ರಾಜ್ಯ ಸರ್ಕಾರವೂ ಪ್ರತೀ ಬಸ್ ಗೆ 33 ಲಕ್ಷ ರೂ. ಸಬ್ಸಿಡಿ ನೀಡಲಿದ್ದು, ಒಂದು ಎಲೆಕ್ಟ್ರಿಕ್ ಬಸ್ ನ ಬೆಲೆ 2 ಕೋ. ರೂ. ಆಗಲಿದೆ. ಒಟ್ಟು 88 ಲಕ್ಷ ರೂ. ಸಬ್ಸಿಡಿ ದೊರೆಯಲಿದೆ. ಅದರಿಂದ ಇಂದನ ವೆಚ್ಚ ಹಾಗೂ ಮಾಲಿನ್ಯ ನಿಯಂತ್ರಣ ಸಾಧ್ಯವಾಗಲಿದ್ದು, ಲಾಭದಾಯಕವೂ ಆಗಲಿದೆ ಎಂದರು.

ರಾಜ್ಯದಲ್ಲಿ ಎಲೆಕ್ಟಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅಂಥ ವಾಹನಗಳ ರಸ್ತೆ ತೆರಿಗೆಯನ್ನು ಸಂಪೂರ್ಣ ಮನ್ನಾ ಮಾಡಲಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ 26 ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳಿವೆ ಎಂದು ಸಚಿವರು ತಿಳಿಸಿದರು.

ರಾಜ್ಯದ ಸಾರಿಗೆ ನೌಕರರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿದ್ದು, ಅವರ 10 ಬೇಡಿಕೆಗಳ ಪೈಕಿ 9ನ್ನು ಈಗಾಗಲೇ ಈಡೇರಿಸಲಾಗಿದೆ. ಇಂಧನದಲ್ಲಿ ಶೇ. 20ರಷ್ಟು ಇಥೆನಾಲ್ ಮಿಶ್ರಣ ಮಾಡುವುದರಿಂದ ಬಸ್ಗಳ ಇಂಧನ ವೆಚ್ಚ ತಗ್ಗಿಸಲು ಸಾಧ್ಯವಿದೆ. ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಲಾಕ್ಡೌನ್ ಅವಧಿದಲ್ಲಿ ಸಾರಿಗೆ ಸಂಚಾರ ಇಲ್ಲದಿದ್ದರೂ ಸಾರಿಗೆ ನೌಕರರಿಗೆ ವೇತನ ನೀಡಲಾಗಿದೆ. ಅದಕ್ಕಾಗಿ ಸರ್ಕಾರದಿಂದ 2 ತಿಂಗಳ ವೇತನಕ್ಕಾಗಿ 650 ಕೋ. ರೂ. ನೆರವು ಪಡೆಯಲಾಗಿದೆ ಎಂದರು.

ಡಾ. ಆಚಾರ್ಯ ಹೆಸರು
ಬನ್ನಂಜೆಯಲ್ಲಿ ನಿರ್ಮಾಣವಾಗುತ್ತಿರುವ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಡಾ. ವಿ. ಎಸ್. ಆಚಾರ್ಯ ಹೆಸರಿಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಟ್ಯಾಕ್ಸಿ ಮಾಲೀಕರು ನೀಡಿರುವ ಮನವಿ ಬಗ್ಗೆ ಅಧಿವೇಶನ ಸಂದರ್ಭದಲ್ಲಿ ಚರ್ಚಿಸಿ ಪರಿಹಾರ ಒದಗಿಸಲಾಗುವುದು ಎಂದು ಡಿಸಿಎಂ ಸವದಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ಜಿಲ್ಲೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಬಸ್ ವ್ಯವಸ್ಥೆ ಅನ್ಯೋನ್ಯತೆಯಿಂದ ನಡೆಯುತ್ತಿದೆ. ಎರಡೂ ವಲಯದಲ್ಲಿ ಅನಾರೋಗ್ಯಕರ ಪೈಪೋಟಿ ನಡೆಸದೆ ಸರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು. ನಗರ ವ್ಯಾಪ್ತಿಯ ಆಟೊಗಳಿಗೆ ಅಂತಿಮ ಗಡವು ವಿಧಿಸಿ ಒಂದು ಬಾರಿ ಪರ್ಮಿಟ್ ನೀಡಿ, ಕಲರ್ ಕೋಡಿಂಗ್ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕ.ರಾ.ರ.ಸಾ. ನಿಗಮ ಅಧ್ಯಕ್ಷ ಎಂ. ಚಂದ್ರಪ್ಪ ಮಾತನಾಡಿ ಕೋವಿಡ್, ಡೀಸೆಲ್ ಬೆಲೆ ಏರಿಕೆಯಾಗಿದ್ದರೂ ಬಸ್ ದರ ಹೆಚ್ಚಿಸಿದೇ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ನಿಗಮದ 1.30 ಲಕ್ಷ ನೌಕರರ ವೇತನಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ಸಹಕಾರದೊಂದಿಗೆ ಸಂಸ್ಥೆಯನ್ನು ಸ್ವಾವಲಂಬಿ ಸಂಸ್ಥೆಯನ್ನಾಗಿ ರೂಪಿಸಲಾಗುವುದು ಎಂದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹಗ್ಡೆ, ಉಡುಪಿ ತಾ. ಪಂ. ಅಧ್ಯಕ್ಷೆ ಸಂಧ್ಯಾ ಕಾಮತ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿ. ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಕ.ರಾ.ರ.ಸಾ. ನಿಗಮ ಉಪಾಧ್ಯಕ್ಷ ಈಶ್ವರಪ್ಪ, ಜಿಲ್ಲಾಧಿಕಾರಿ ಜಿ. ಜಗದೀಶ್, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಹೆಚ್ಚುವರಿ ಸಾರಿಗೆ ಆಯುಕ್ತ ನರೇಂದ್ರ ಹೋಲ್ಕರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್, ಕ.ರಾ.ರ.ಸಾ. ನಿಗಮ ನಿರ್ದೇಶಕರು ಇದ್ದರು

ಕ.ರಾ.ರ.ಸಾ. ನಿಗಮ ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿ ಅರುಣ ಸ್ವಾಗತಿಸಿ, ವಿಭಾಗೀಯ ಸಂಚಲನಾಧಿಕಾರಿ ಕಮಲ್ ಕುಮಾರ್ ವಂದಿಸಿದರು. ಪ್ರಶಾಂತ್ ಶೆಟ್ಟಿ ನಿರೂಪಿಸಿದರು.

ಕಾಮಗಾರಿ ವೀಕ್ಷಣೆ
ಬನ್ನಂಜೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಉಪಮುಖ್ಯಮಂತ್ರಿ ಲಕ್ಷ್ಮಣ ಸಂಗಪ್ಪ ಸವದಿ ಪರಿಶೀಲನೆ ನಡೆಸಿದರು. ಶಾಸಕರಾದ ರಘುಪತಿ ಭಟ್ ಮತ್ತು ಲಾಲಾಜಿ ಆರ್. ಮೆಂಡನ್, ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಎಂ. ಚಂದ್ರಪ್ಪ, ಉಪಾಧ್ಯಕ್ಷರಾದ ಎಸ್. ಎನ್. ಈಶ್ವರಪ್ಪ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಮತ್ತು ಕೆ.ಎಸ್.ಆರ್.ಟಿ.ಸಿ ಇಲಾಖೆ ಅಧಿಕಾರಿಗಳು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!