Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಜಿಲ್ಲೆಯ ಕರಕುಶಲ ವೈಶಿಷ್ಟ್ಯಪೂರ್ಣ ವಸ್ತುಗಳ ರಫ್ತು ಕುರಿತು ನೀಲ ನಕಾಶೆ

ಜಿಲ್ಲೆಯ ಕರಕುಶಲ ವೈಶಿಷ್ಟ್ಯಪೂರ್ಣ ವಸ್ತುಗಳ ರಫ್ತು ಕುರಿತು ನೀಲ ನಕಾಶೆ

ಜಿಲ್ಲೆಯ ಕರಕುಶಲ ವೈಶಿಷ್ಟ್ಯಪೂರ್ಣ ವಸ್ತುಗಳ ರಫ್ತು ಕುರಿತು ನೀಲ ನಕಾಶೆ
(ಸುದ್ದಿಕಿರಣ ವರದಿ)

ಉಡುಪಿ: ಜಿಲ್ಲೆಯಲ್ಲಿ ದೊರೆಯುವ ಮತ್ತು ಉತ್ಪಾದಿಸುವ ಕರಕುಶಲ ವಸ್ತುಗಳು, ಆಹಾರ ಪದಾರ್ಥಗಳು ಸೇರಿದಂತೆ ವಿವಿಧ ವೈಶಿಷ್ಟ್ಯಪೂರ್ಣ ವಸ್ತುಗಳನ್ನು ಬ್ರಾಂಡಿಂಗ್ ಮಾಡಿ, ರಫ್ತು ಮಾಡಲು ನೀಲ ನಕಾಶೆ ಸಿದ್ದಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು.

ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ ವಾಣಿಜ್ಯ ಸಪ್ತಾಹ ಅಂಗವಾಗಿ ಮಣಿಪಾಲದ ಜಿಲ್ಲಾ ಸಣ್ಣ ಕೈಗಾರಿಕೆ ಸಂಘದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರಫ್ತುದಾರರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಗೋಡಂಬಿಯನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಕ್ಯಾಶ್ಯೂ ಹೊರತುಪಡಿಸಿ ವಿವಿಧ ಕರಕುಶಲ ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು, ಅದರೊಂದಿಗೆ ಮರೈನ್ ಉತ್ಪನ್ನಗಳನ್ನೂ ರಫ್ತು ಮಾಡಲು ಉದ್ದಿಮೆದಾರರು ಪ್ರಯತ್ನಿಸಬೇಕು ಎಂದರು.

ರಫ್ತು ಮಾಡುವ ಕಾರ್ಯದಲ್ಲಿ ಅಗತ್ಯವಾಗಿ ಬೇಕಿರುವ ಅನುಮತಿ ಮತ್ತಿತರ ಆವಶ್ಯಕತೆಗಳ ಕುರಿತು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ನೆರವು ದೊರಕಿಸಲು ಪ್ರಯತ್ನಿಸಲಾಗುವುದು ಎಂದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಿಂಗಲ್ ವಿಂಡೋ ವ್ಯವಸ್ಥೆ ಮೂಲಕ ಬಗೆಹರಿಸಲಾಗುತ್ತಿದೆ ಎಂದರು.

ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ರಾಮಾ ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ ಕ್ಯಾಶ್ಯೂ ಮತ್ತು ಮೀನು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಆಗುತ್ತಿದ್ದು, ರಫ್ತು ಮಾಡಲು ಇತರ ಸಂಪನ್ಮೂಲಗಳೂ ಜಿಲ್ಲೆಯಲ್ಲಿವೆ. ಉತ್ತಮ ರಸ್ತೆ, ಜಲ ಮತ್ತು ವಾಯು ಸಾರಿಗೆ ವ್ಯವಸ್ಥೆಯೂ ಇದ್ದು, ಉದ್ದಿಮೆದಾರರು ಅದರ ಪ್ರಯೋಜನ ಪಡೆಯಬೇಕು. ಕೆನರಾ ಬ್ಯಾಂಕ್ ವತಿಯಿಂದ ರಫ್ತು ಉದ್ದಿಮೆಗಳಿಗೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.

ಕರ್ನಾಟಕ ತಾಂತ್ರಿಕ ಸಲಹಾ ಸೇವೆಗಳ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಉಡುಪಿ ನೋಡೆಲ್ ಅಧಿಕಾರಿ ರಮಾನಂದ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಕ್ಯಾಶ್ಯೂ ಉತ್ಪಾದಕ ಸಂಘದ ಅಧ್ಯಕ್ಷ ಸಂತೋಷ್ ಡಿ’ಸಿಲ್ವಾ, ಉಡುಪಿ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೃಷ್ಣರಾವ್ ಕೊಡಂಚ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಶಾಂತ್ ಬಾಳಿಗ ಇದ್ದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಸ್ವಾಗತಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!