Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಮಲ್ಪೆಯಲ್ಲಿ ತೇಲುವ ಸೇತುವೆ ಉದ್ಘಾಟನೆ

ಮಲ್ಪೆಯಲ್ಲಿ ತೇಲುವ ಸೇತುವೆ ಉದ್ಘಾಟನೆ

ಸುದ್ದಿಕಿರಣ ವರದಿ
ಶನಿವಾರ, ಮೇ 7

ಮಲ್ಪೆಯಲ್ಲಿ ತೇಲುವ ಸೇತುವೆ ಉದ್ಘಾಟನೆ
ಉಡುಪಿ: ರಾಜ್ಯದ ಮೊದಲ ಸಮುದ್ರದಲ್ಲಿ ತೇಲುವ ಸೇತುವೆ (ಫ್ಲೋಟಿಂಗ್ ಬ್ರಿಡ್ಜ್) ಯನ್ನು ಮಲ್ಪೆ ಬೀಚ್ ನಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಉದ್ಘಾಟಿಸಿದರು.

ಮಲ್ಪೆ ಸಮುದ್ರ ತೀರ ಈಗಾಗಲೇ ದೇಶ ವಿದೇಶಗಳ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿದ್ದು, ಪ್ರಸ್ತುತ ನಿರ್ಮಾಣಗೊಂಡಿರುವ ಸಮುದ್ರದಲ್ಲಿ ತೇಲುವ ಸೇತುವೆ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲಿದೆ.

ಪ್ರವಾಸಿಗರನ್ನು ಆಕರ್ಷಿಸುವುದು ಮಾತ್ರವಲ್ಲದೇ, ಭದ್ರತೆ ಒದಗಿಸುವುದೂ ನಮ್ಮ ಕರ್ತವ್ಯವಾಗಿದ್ದು, ಹಾಗಾಗಿ ಫ್ಲೋಟಿಂಗ್ ಬ್ರಿಡ್ಜ್ ಯೋಜನೆಯ ಆರಂಭದಲ್ಲೇ 20ರಿಂದ 25 ಲೈಫ್ ಗಾರ್ಡ್ ಗಳ ನೇಮಕ ಮಾಡಲಾಗಿದೆ ಎಂದರು.

ಹೊಸತನ ಇದ್ದಾಗ ಮಾತ್ರ ಪ್ರವಾಸಿಗರು ಹೆಚ್ಚು ಆಕರ್ಷಿತರಾಗುತ್ತಾರೆ. ಮಲ್ಪೆ ಕಡಲ ತೀರದಲ್ಲಿ ಈಗಾಗಲೇ ಪ್ಯಾರಾಚೂಟ್ ಕೂಡಾ ಇದ್ದು, ಪ್ರವಾಸಿಗರು ಅದರಿಂದ ಸಾಕಷ್ಟು ಮನೋರಂಜನೆ ಪಡೆಯುತ್ತಿದ್ದಾರೆ. ಇದೀಗ ನಿರ್ಮಿಸಲಾದ ಫ್ಲೋಟಿಂಗ್ ಬ್ರಿಡ್ಜ್ ನಿಂದಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮಲ್ಪೆ ಬೀಚ್ ಗೆ ಭೇಟಿ ನೀಡಲಿದ್ದಾರೆ ಎಂದರು.

ಸ್ಥಳೀಯ ಯುವಕರು ಪ್ರವಾಸಿಗರಿಗೆ ಗರಿಷ್ಠ ಭದ್ರತೆಯೊಂದಿಗೆ ಸಂತೋಷ ನೀಡುವ ಹೊಸ ಯೋಜನೆ ಆರಂಭಿಸಲು ಯೋಚಿಸಿದಲ್ಲಿ ಜಿಲ್ಲಾಡಳಿತ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿ ವತಿಯಿಂದ ಅಗತ್ಯ ಸಹಕಾರ ನೀಡಲಾಗುವುದು. ಅದರಿಂದ ಪ್ರವಾಸಿಗರ ಮನೋರಂಜನೆಗೆ ಉತ್ತಮ ಅವಕಾಶ ಹಾಗೂ ಸ್ಥಳೀಯ ಯುವಕರಿಗೆ ಉದ್ಯೋಗ ದೊರೆತಂತಾಗುತ್ತದೆ.

ಹಾಗಾಗಿ ಇಂಥ ಯೋಜನೆಯ ಆವಿಷ್ಕಾರಗಳು ಹೆಚ್ಚಾಗಿ ಜಾರಿಗೆ ಬರಬೇಕು ಎಂದರು.

ಪ್ರವಾಸಿಗರ ಭದ್ರತೆ ದೃಷ್ಟಿಯಿಂದ ಎರಡು ಜೆಟ್ ಸ್ಕೀಗಳನ್ನು ಜಿಲ್ಲಾಡಳಿತ ವತಿಯಿಂದ ಖರೀದಿಸಿ, ಸೈಂಟ್ ಮೇರಿಸ್ ಮತ್ತು ಮಲ್ಪೆ ಬೀಚ್ ನಲ್ಲಿ ರಕ್ಷಣೆಗೆ ಬಳಸಿಕೊಳ್ಳಲಾಗುವುದು ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಮಲ್ಪೆ ಬೀಚ್ ಅಭಿವೃದ್ದಿ ಸಮಿತಿ ಅಧ್ಯಕ್ಷ ಪಾಂಡುರಂಗ ಮಲ್ಪೆ, ನಗರಸಭೆ ಸ್ಥಾಯಿ ಸಮಿತಿ ಸದಸ್ಯ ಮಂಜು ಕೊಳ, ಮಲ್ಪೆ ಬೀಚ್ ಗುತ್ತಿಗೆದಾರ ಸುದೇಶ್ ಶೆಟ್ಟಿ, ಶೇಖರ್ ಪುತ್ರನ್, ಧನಂಜಯ ಕಾಂಚನ್ ಮೊದಲಾದವರಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಏನಿದು ವಿಶೇಷತೆ
ತೇಲುವ ಸೇತುವೆಯಲ್ಲಿ ಮಲ್ಪೆ ಬೀಚ್ ಗೆ ಭೇಟಿ ನೀಡುವ ಪ್ರವಾಸಿಗರು ಅಲೆಗಳ ಮೇಲೆ ನಡೆಯುವ ಅನುಭವ ಆನಂದಿಸಬಹುದು. ಸೇತುವೆ 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲ ಹೊಂದಿದ್ದು, ಹೆಚ್ಚಿನ ಸಾಂದ್ರತೆಯ ಪೊಂಟೋನ್ಸ್ ಬ್ಲಾಕ್ ಗಳಿಂದ ಮಾಡಲ್ಪಟ್ಟಿದೆ. ಒಂದು ಬಾರಿಗೆ 100 ಮಂದಿ ಸಾಗಬಹುದು.

ಸೇತುವೆಯ ಕೊನೆಯಲ್ಲಿ ಸಮುದ್ರಕ್ಕೆ ಚಾಚಿರುವಂತೆ 12 ಮೀಟರ್ ಉದ್ದ, 7.5 ಮೀಟರ್ ಅಗಲದ ವೇದಿಕೆ ಇದ್ದು ಅದರಲ್ಲಿ 15 ನಿಮಿಷ ಕಾಲ ಕಳೆಯಲು ಅವಕಾಶ ಕಲ್ಪಿಸಲಾಗುತ್ತದೆ. ಸೇತುವೆ ಇಕ್ಕೆಲಗಳಲ್ಲಿ 10 ಮಂದಿ ಲೈಫ್ ಗಾರ್ಡ್ ಇರುತ್ತಾರೆ.

ಸ್ಥಳೀಯರು ಈ ತೇಲುವ ಸೇತುವೆ ನಿರ್ಮಿಸಿದ್ದು ಸೇತುವೆ ಸಮುದ್ರದ ಅಲೆಗಳ ಹೊಡೆತಕ್ಕೆ ಮೇಲೇರಿ ಕೆಳಗಿಳಿಯುವುದನ್ನು ಅನುಭವಿಸಬಹುದು.

ಇದು ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದ್ದು, ಮಲ್ಪೆ ಬೀಚ್ ಗೆ ಮತ್ತೊಂದು ಗರಿ ಎನಿಸಲಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!