ಉಡುಪಿ: ಇಲ್ಲಿನ ಗಾಂಧಿ ಆಸ್ಪತ್ರೆ ತನ್ನ ರಜತ ವರ್ಷಾಚರಣೆ ಸಂಭ್ರಮದಲ್ಲಿ ಹೊರತಂದಿರುವ ಸಿಲ್ವರ್ ಸ್ಟೆಥ್ ಸ್ಮರಣಸಂಚಿಕೆಯನ್ನು ನಾಡಿನ ಪಾವನ ಕ್ಷೇತ್ರ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅನಾವರಣಗೊಳಿಸಿದರು.
ಕಳೆದ 25 ವರ್ಷದಿಂದ ಖಾಯಿಲೆಗೊಳಗಾದವರ ಯೋಗಕ್ಷೇಮದ ಕಾಳಜಿ ಹೊತ್ತು ಸೂಕ್ತ ಚಿಕಿತ್ಸೆ ಮತ್ತು ಸಾಂತ್ವನ ನೀಡುವ ಮೂಲಕ ಆರೋಗ್ಯ ಕ್ಷೇತ್ರ ಮಾತ್ರವಲ್ಲದೆ, ವಿವಿಧ ರೀತಿಯ ಸಮಾಜಮುಖಿ ಸೇವೆ
ಮಾಡಿಕೊಂಡು ಬಂದಿರುವ ಗಾಂಧಿ ಆಸ್ಪತ್ರೆ ಹಾಗೂ ಪಂಚಮಿ ಟ್ರಸ್ಟ್ ಮತ್ತು ಪಂಚಲಹರಿ ಫೌಂಡೇಶನ್ ನ ವಿವಿಧ ಕಾರ್ಯಕ್ರಮಗಳ ವಿಶೇಷ ವಿವರಗಳನ್ನೊಳಗೊಂಡ ಸ್ಮರಣಸಂಚಿಕೆಯನ್ನು ವೀಕ್ಷಿಸಿದ ಡಾ| ಹೆಗ್ಗಡೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಸ್ಥೆಗೆ ಶುಭ ಹಾರೈಸಿದರು.
ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಎಂ. ಹರಿಶ್ಚಂದ್ರ ಮತ್ತು ಲಕ್ಷ್ಮೀ ಹರಿಶ್ಚಂದ್ರ ಹಾಗೂ ಮಣಿಪಾಲ ಶ್ರೀ ಪ್ರಸನ್ನ
ಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿಪ್ರಸಾದ್ ರೈ ಬೆಳ್ಳಿಪ್ಪಾಡಿ ಇದ್ದರು.
ಬಳಿಕ ಸ್ವತಃ ಡಾ| ಹೆಗ್ಗಡೆ ಅವರು ಹರಿಶ್ಚಂದ್ರ ದಂಪತಿಯನ್ನು `ಮಂಜೂಷಾ’ ವಸ್ತುಸಂಗ್ರಹಾಲಯಕ್ಕೆ ಕರೆದೊಯ್ದು, ಅಲ್ಲಿನ ವಿಶಿಷ್ಟ ಸಂಗ್ರಹ ಬಗ್ಗೆ ವಿವರಿಸಿದರು.
ಏನಿದು ಸಿಲ್ವರ್ ಸ್ಟೆಥ್?
ಸಿಲ್ವರ್ ಸ್ಟೆಥ್ ಎಂಬ ಪಂಚಾಕ್ಷರವನ್ನು ಆಸ್ಪತ್ರೆ ಆಡಳಿತ ನಿರ್ದೇಶಕ ಎಂ. ಹರಿಶ್ಚಂದ್ರ ಈ ರೀತಿ ವಿಶ್ಲೇಷಿಸುತ್ತಾರೆ- ಸಿಲ್ವರ್ ಎಂದರೆ ಬೆಳ್ಳಿಯಂತೆ ಶುಭ್ರವಾದದ್ದು, ಗ್ರೀಕ್ ಪದ ಸ್ಟೆಥೊ ಎಂದರೆ ಚೆಸ್ಟ್- ಹೃದಯದ ಭಾಗ. ಸಿಲ್ವರ್ ಸ್ಟೆಥ್ ಎಂದರೆ ಶುಭ್ರವಾದ ಹೃದಯ. ಮಾನವೀಯತೆಯ ಸೇವೆಯಲ್ಲಿ ಶುದ್ಧಸ್ಪಟಿಕ ಪರಿಶುದ್ಧ ಹೃದಯದ ಅಂತಃರಂಗವನ್ನು ಸ್ಮರಣಸಂಚಿಕೆಯ ಮೂಲಕ ಅನಾವರಣಗೊಳಿಸಲಾಗಿದೆ. ಆ ಮೂಲಕ ಸಂಸ್ಥೆಯ ಧ್ಯೇಯ ಹಾಗೂ ಆಶಯವನ್ನು ಮನಃಪೂರ್ವಕವಾಗಿ ಬಿಂಬಿಸಲಾಗಿದೆ