Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಗಾಂಧಿ ಆಸ್ಪತ್ರೆ ಸ್ವಚ್ಛ ಭಾರತ್ ಅಭಿಯಾನಕ್ಕೆ ಪಂಚ ವರ್ಷ ಪೂರ್ಣ

ಗಾಂಧಿ ಆಸ್ಪತ್ರೆ ಸ್ವಚ್ಛ ಭಾರತ್ ಅಭಿಯಾನಕ್ಕೆ ಪಂಚ ವರ್ಷ ಪೂರ್ಣ

ಸುದ್ದಿಕಿರಣ ವರದಿ
ಸೋಮವಾರ, ಜನವರಿ 17

ಗಾಂಧಿ ಆಸ್ಪತ್ರೆ ಸ್ವಚ್ಛ ಭಾರತ್ ಅಭಿಯಾನಕ್ಕೆ ಪಂಚ ವರ್ಷ ಪೂರ್ಣ
ಉಡುಪಿ: ರೋಗ ಚಿಕಿತ್ಸೆಗಿಂತ ಮುನ್ನೆಚ್ಚರಿಗೆ ಅಗತ್ಯ ಎಂಬ ಮಾತು ವೈದ್ಯಕೀಯ ಕ್ಷೇತ್ರದಲ್ಲಿ ಸಾಮಾನ್ಯ ಮಾತು.
ಆದರೆ, ಸ್ವಚ್ಛತೆಯಿಂದ ಸ್ವಸ್ಥ ಜೀವನ ಎಂಬ ಆಶಯದೊಂದಿಗೆ ರೋಗರುಜಿನಗಳಿಂದ ದೂರವಿರುವ ಸಾಮಾಜಿಕ ಕಳಕಳಿಯಿಂದ ಸಮುದಾಯದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಲ್ಲಿ ಶ್ರಮಿಸುತ್ತಿರುವ ಇಲ್ಲಿನ ಪ್ರತಿಷ್ಠಿತ ಗಾಂಧಿ ಆಸ್ಪತ್ರೆ ಆರಂಭಿಸಿದ ಸ್ವಚ್ಛ ಭಾರತ್ ಅಭಿಯಾನ 5 ವರ್ಷ ಪೂರ್ಣಗೊಳಿಸಿದೆ.

ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಹಾಗೂ ಸಾಮಾಜಿಕ ಸ್ವಾಸ್ಥ್ಯದ ಕಳಕಳಿಯ ಎಂ. ಹರಿಶ್ಚಂದ್ರ ಅವರ ಕಲ್ಪನೆಯಲ್ಲಿ 2017ರ ಜ. 12ರಂದು ಸ್ವಾಮಿ ವಿವೇಕಾನಂದ ಜನ್ಮದಿನದಂದು ಆರಂಭಗೊಂಡು ಸ್ವಚ್ಛತಾ ಅಭಿಯಾನ ಪಂಚ ವರ್ಷಗಳ ಅವಧಿಯಲ್ಲಿ ಅನೂಚಾನವಾಗಿ ನಡೆದಿದೆ.

262 ವಾರಗಳಲ್ಲಿ ನಿರಂತರ ಸ್ವಚ್ಛತೆ
ಸ್ವಚ್ಛ ಭಾರತ್ ಮತ್ತು ಸ್ವಚ್ಛ ಸುಂದರ ಉಡುಪಿ ನಗರ ಜನಾರೋಗ್ಯಕ್ಕೆ ಆಧಾರ ಎಂಬ ಆಶಯದೊಂದಿಗೆ ನಮ್ಮ ನಗರ ಸ್ವಚ್ಛ ಸುಂದರವಾಗಿದ್ದರೆ ನಾವೆಲ್ಲರೂ ಆರೋಗ್ಯವಂತರಾಗಿ ಬಾಳಲು ಸಾಧ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭಗೊಂಡ ಅಭಿಯಾನ 262 ವಾರಗಳಿಂದ ಸತತವಾಗಿ ನಡೆಯುವ ವಿನೂತನ ಪರಿಕಲ್ಪನೆಯ ಜನ ಜಾಗೃತಿ ಪರಿಸರ ಸ್ವಚ್ಛತಾ ಕಾರ್ಯದಲ್ಲಿ ಸ್ವಯಂಪ್ರೇರಿತರಾಗಿ ಗಾಂಧಿ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ, ಪ್ರತೀ ಭಾನುವಾರ ಬೆಳಿಗ್ಗೆ 6ರಿಂದ 7 ಗಂಟೆ ವರೆಗೆ ನಗರದ ಸಿಟಿ ಬಸ್ ನಿಲ್ದಾಣದ ಗಾಂಧಿ ಆಸ್ಪತ್ರೆ ಎದುರಿನ ರಸ್ತೆಯಿಂದ ಕಲ್ಸಂಕ ವೃತ್ತ ವರೆಗಿನ ರಾಜ ಮಾರ್ಗದ ಇಕ್ಕೆಲಗಳಲ್ಲಿಯೂ ಸ್ವಚ್ಛತೆ ಕಾರ್ಯಕ್ರಮ ನಡೆಯುತ್ತಿದ್ದು, ಅದರೊಂದಿಗೆ ಜನ ಜಾಗೃತಿ ಅಂಗವಾಗಿ ಪರಿಸರ ಸ್ವಚ್ಛತೆ ಕಾಪಾಡಲು ಮಾರ್ಗದ ಇಕ್ಕೆಲಗಳಲ್ಲಿ ಕಸದ ಬುಟ್ಟಿ (ಕಾಗದ ಮತ್ತು ಪ್ಲಾಸ್ಟಿಕ್ ಪೊಟ್ಟಣ ಹಾಕಲು)ಗಳನ್ನು ಒದಗಿಸಿರುವುದು, ರಸ್ತೆಯ ವಿಭಾಜಕಗಳಲ್ಲಿ ಗಿಡಗಳನ್ನು ನೆಟ್ಟು ಪಂಚಮಿ ಟ್ರಸ್ಟ್ ಮೂಲಕ ಪೋಷಿಸಲಾಗುತ್ತಿರುವುದು ಮೌನ ಸಾಧನೆ.

ಮಾದರಿ ಕಾರ್ಯಕ್ರಮ
ಗಾಂಧಿ ಆಸ್ಪತ್ರೆಯ ಸ್ವಚ್ಛತಾ ಅಭಿಯಾನ 5 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಭಾನುವಾರ (ಜ. 16) ನಡೆದ ಸಮಾರಂಭದ ಅಭ್ಯಾಗತರಾಗಿ ಆಗಮಿಸಿದ ಖ್ಯಾತ ಮನೋವೈದ್ಯ, ಬಾಳಿಗ ಆಸ್ಪತ್ರೆ ನಿರ್ದೇಶಕ ಡಾ. ಪಿ. ವಿ. ಭಂಡಾರಿ, ಫುಟ್ ಪಾತ್ ಗಳಿಗೆ ಸುಣ್ಣ ಬಣ್ಣವನ್ನು ಬಳಿಯುವ ಮೂಲಕ ಸ್ವಯಂ ಸೇವಕರನ್ನು ಹುರಿದಂಬಿಸಿದರು. ಗಾಂಧಿ ಆಸ್ಪತ್ರೆಯ ಈ ಸುದೀರ್ಘ, ನಿರಂತರ ಕಾರ್ಯಕ್ರಮ ಶ್ಲಾಘನೀಯ.

ಇಂಥ ಕಾರ್ಯ ಉಡುಪಿ ಸುತ್ತಮುತ್ತಲ ಪ್ರದೇಶಗಳಲ್ಲೂ ನಡೆದರೆ ಉಡುಪಿ ನಗರ ಸ್ವಚ್ಛ ನಗರವಾಗಿ ಮಾದರಿಯಾಗುತ್ತದೆ ಎಂದರು.

ನಿರಂತರವಾಗಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಸ್ವಯಂಸೇವಕರು ಮತ್ತು ಗಾಂಧಿ ಆಸ್ಪತ್ರೆ ಸಿಬ್ಬಂದಿಗಳನ್ನು ಅಭಿನಂದಿಸಿದರು.

ಜನತೆಯಲ್ಲಿ ಹೆಚ್ಚಿದ ಅರಿವು
ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಎಂ. ಹರಿಶ್ಚಂದ್ರ ಪ್ರಸ್ತಾವಿಕವಾಗಿ ಮಾತನಾಡಿ, ಕೇವಲ ಪ್ರಚಾರಕ್ಕಾಗಿ ಈ ಸೇವೆಯನ್ನು ಸೀಮಿತಗೊಳಿಸದೆ ಇಡೀ ವಿಶ್ವದಲ್ಲಿ ಭಾರತ ಸ್ವಚ್ಛ ಭಾರತವಾಗಿ ಪರಿವರ್ತಿತಗೊಳ್ಳಲು ಪ್ರೇರಣೆ ಮಾಡುವ ನಮ್ಮ ಸಣ್ಣ ಜನ ಜಾಗೃತಿ ಅಭಿಯಾನಕ್ಕೆ ವೈದ್ಯ ಮಿತ್ರರು, ಸಿಬ್ಬಂದಿ, ಸಾರ್ವಜನಿಕರು ಖುದ್ದು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸುತ್ತಿದ್ದಾರೆ.

ಆ ಮೂಲಕ ಸ್ವಚ್ಛ ಭಾರತ್ ಅಭಿಯಾನ ಬಗ್ಗೆ ಜನರಲ್ಲಿ ಅರಿವು ಹೆಚ್ಚಿಸುವುದರೊಂದಿಗೆ, ನಗರಸಭೆಯ ಅಧಿಕಾರಿಗಳು ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಇಂಥ ಅಭಿಯಾನದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವ ಮೂಲಕ ಸ್ವಚ್ಛ ಸುಂದರ ಉಡುಪಿ ನಗರ ಜನಾರೋಗ್ಯಕ್ಕೆ ಆಧಾರವಾಗಲಿ ಎಂದು ಹಾರೈಸಿದರು.

ಸ್ವಚ್ಛ ಭಾರತ್ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವವರಿಗೆ ಕೃತಜ್ಞತೆ ಸಲ್ಲಿಸಿದರು.

ನೈಜ ರಾಜ ಮಾರ್ಗ
ಗಾಂಧಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ, ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಸ್ವಯಂಸೇವಕರ ಕರ್ತವ್ಯ ನಿಷ್ಠೆ, ಛಲ ಹಾಗೂ ಪರಿಸರ ಕಾಳಜಿಯಿಂದ ಇಂಥ ಸುದೀರ್ಘ ಅಭಿಯಾನ ನೆರವೇರಲು ಸಾಧ್ಯವಾಗಿದೆ. ಕಲ್ಸಂಕ ವೃತ್ತದ ವರೆಗಿನ ಹೆದ್ದಾರಿಯೂ ಹೂ ಗಿಡಗಳಿಂದ ಅಲಂಕೃತಗೊಂಡು ಸ್ವಚ್ಛತೆಯಿಂದ ನೈಜ ರಾಜಮಾರ್ಗವಾಗಿದೆ ಎಂದರು.

ಸ್ವಚ್ಛ ಭಾರತ್ ಅಭಿಯಾನದಲ್ಲಿ ಸತತವಾಗಿ ಭಾಗವಹಿಸಿದ ಆಸ್ಪತ್ರೆ ಸಿಬ್ಬಂದಿ ಮುಂಡ್ಕೂರು ಧೀರನಾಥ್ ಮೂಲ್ಯ ಅವರನ್ನು ಡಾ. ಭಂಡಾರಿ ಶಾಲು ಹೊದಿಸಿ ಗೌರವಿಸಿದರು.

ಸಾರ್ವಜನಿಕವಾಗಿ ನಿರಂತರವಾಗಿ ಭಾಗವಹಿಸುವ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ನರಸಿಂಹಮೂರ್ತಿ, ಮಾಹೆ ಉದ್ಯೋಗಿ ರಾಜೇಶ್ ಪಣಿಯಾಡಿ ಮತ್ತು ಡಾ. ಶುಭ ರವಿ ರಾವ್ ಅವರನ್ನು ಗೌರವಿಸಲಾಯಿತು.

ಸಮಾರಂಭದಲ್ಲಿ ಛಾಯಾಚಿತ್ರ ಪತ್ರಕರ್ತ ಜನಾರ್ದನ ಕೊಡವೂರು, ಅಂಚೆ ಇಲಾಖೆ ಉದ್ಯೋಗಿ ಲೇಖಕಿ ಪೂರ್ಣಿಮಾ ಜನಾರ್ದನ್, ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸಂಚಾಲಕ ರವಿರಾಜ್ ಎಚ್. ಪಿ., ಗಾಂಧಿ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!