Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಗಿರಿಜನರ ಕಲೆಗೆ ಪ್ರೋತ್ಸಾಹ ಅಗತ್ಯ

ಗಿರಿಜನರ ಕಲೆಗೆ ಪ್ರೋತ್ಸಾಹ ಅಗತ್ಯ

ಉಡುಪಿ: ವಿವಿಧತೆಯಲ್ಲಿ ಏಕತೆ ಹೊಂದಿರುವ ಬಹುದೊಡ್ಡ ದೇಶ ನಮ್ಮದು. ವಿವಿಧ ಧರ್ಮ, ಭಾಷೆ, ಸಂಸ್ಕೃತಿ ನಮ್ಮಲ್ಲಿದೆ. ಸಮಾಜದಲ್ಲಿ ಹಿಂದುಳಿದ ಆದರೆ, ಸಂಸ್ಕೃತಿಯಲ್ಲಿ ಮುಂದಿರುವ ಗಿರಿಜನರ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸಮಾಜ ಮತ್ತು ರಾಷ್ಟ್ರ ಮಟ್ಟದ ಮುಖ್ಯವಾಹಿನಿಗೆ ತರಬೇಕು ಎಂದು ಮಂಗಳೂರು ಕರಾವಳಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಕರೆ ನೀಡಿದರು.

ಶನಿವಾರ ಪರ್ಕಳ ಶ್ರೀ ಅಂಬಾಭವಾನಿ ಮರಾಠಿ ಸಾಂಸ್ಕೃತಿಕ ಕಲಾ ವೇದಿಕೆ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಗಿರಿಜನ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೈವಿಧ್ಯಮಯ ಕಲಾಪ್ರಕಾರಗಳನ್ನು ಗುರುತಿಸುವ ಮೂಲಕ ಗಿರಿಜನರ ಪ್ರತಿಭೆಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದು, ಆ ಸಮುದಾಯವನ್ನು ಆರ್ಥಿಕ ಮತ್ತು ಶೈಕ್ಷಣಿಕ ಸದೃಢರನ್ನಾಗಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂಥ ಕಾರ್ಯಕ್ರಮ ಆಯೋಜಿಸಿರುತ್ತಿರುವುದು ಶ್ಲಾಘನೀಯ ಎಂದರು.
ಜಿ. ಪಂ. ಅಧ್ಯಕ್ಷ ದಿನಕರ ಬಾಬು, ಇಂದಿನ ಕಾಲದಲ್ಲಿ ಕಲಾ ಪ್ರತಿಭೆಗಳು ಕಡಿಮೆಯಾಗುತ್ತಿದ್ದು, ಹೊಸ ಹೊಸ ಕಲಾಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುತ್ತಿದೆ.

ಕೊರೊನಾದಿಂದ ಕಣ್ಮರೆಯಾಗಿದ್ದ ಹೊಸ ಪ್ರತಿಭೆಗಳಿಗೆ ಮತ್ತೆ ಚಿಗುರು ಮೂಡಿಸುವ ಕೆಲಸ ಆಗಬೇಕು ಎಂದು ಆಶಿಸಿದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಸಮಾಜದಲ್ಲಿ ಬಹಳ ಹಿಂದುಳಿದ ಗಿರಿಜನರು ಸಂಸ್ಕೃತಿಯನ್ನು ಅಚ್ಚುಕಟ್ಟಾಗಿ ಉಳಿಸಿಕೊಂಡು ಬಂದವರು. ಅವರು ಸಮಾಜದ ಮುನ್ನೆಲೆಗೆ ಬರುವಂತಾಗಬೇಕು ಎಂದರು.
ಉಡುಪಿ ನಗರ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ತಾ. ಪಂ. ಅಧ್ಯಕ್ಷೆ ಸಂಧ್ಯಾ ಕಾಮತ್, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯೆ ಪೂರ್ಣಿಮಾ ಸುರೇಶ ನಾಯಕ್, ಅಂಬಾಭವಾನಿ ಮರಾಠಿ ಸಾಂಸ್ಕೃತಿಕ ಕಲಾವೇದಿಕೆ ಅಧ್ಯಕ್ಷ ಪರ್ಕಳ ಕೃಷ್ಣ ನಾಯಕ್, ಅನಂತ ನಾಯಕ್ ಮೊದಲಾದವರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ಅಚ್ಯುತ ನಾಯಕ್ ವಂದಿಸಿದರು. ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದ್ಯಸ್ಯೆ ಶಿಲ್ಪಾ ಜೋಷಿ ನಿರೂಪಿಸಿದರು.

ಬಳಿಕ ವಿವಿಧ ಜಿಲ್ಲೆ ಮತ್ತು ತಾಲೂಕುಗಳಿಂದಾಗಮಿಸಿದ ಕಲಾ ಪ್ರತಿಭೆಗಳು ತಮ್ಮ ಕಲೆ ಪ್ರದರ್ಶಿಸಿದರು. ವೀರಗಾಸೆ, ಸಿದ್ಧಿ ನೃತ್ಯ, ಡೊಳ್ಳು ಕುಣಿತ, ಸುಗಮ ಸಂಗೀತ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!