Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಅರಿವು ಮೂಡಿಸಿ

ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಅರಿವು ಮೂಡಿಸಿ

ಉಡುಪಿ: ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಿದ್ದು, ಈ ಕಾಯ್ದೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಜೊತೆಗೆ ಕಾಯ್ದೆಯ ಉಲ್ಲಂಘನೆ ನಡೆಯದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಬಿ. ಚವ್ಹಾಣ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪಶು ಸಂಗೋಪನೆ, ಹಜ್ ಮತ್ತು ವಕ್ಫ್ ಇಲಾಖೆ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೂತನ ಕಾಯ್ದೆ ವ್ಯಾಪ್ತಿಯಲ್ಲಿ ಹಸು, ಕರು, ಎತ್ತು ಮತ್ತು ಹೋರಿ ಹಾಗೂ 13 ವರ್ಷದೊಳಗಿನ ಎಮ್ಮೆ ಮತ್ತು ಕೋಣಗಳೂ ಒಳಗೊಂಡಿವೆ. ಕಾಯ್ದೆಯನ್ನು ಮೊದಲ ಬಾರಿ ಉಲ್ಲಂಘಿಸಿದವರಿಗೆ 3ರಿಂದ 6 ವರ್ಷ ಮತ್ತು 50 ಸಾವಿರ ರೂ.ನಿಂದ 5 ಲಕ್ಷ ವರೆಗೆ ದಂಡ ಮತ್ತು ಎರಡನೇ ಬಾರಿ ಉಲ್ಲಂಘಿಸುವವರಿಗೆ 10 ಲಕ್ಷ ವರೆಗೆ ದಂಡ ವಿಧಿಸಲು ಅವಕಾಶವಿದೆ.

ಜಾನುವಾರುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಬೇಕಾಗಿದ್ದಲ್ಲಿ ವೈದ್ಯರ ಪ್ರಮಾಣಪತ್ರ ಮತ್ತು ಮಾಲಿಕನ ವಿವರ, ಪಶುಗಳಿಗೆ ಕಿವಿಯೋಲೆ ಇರಬೇಕು. ಸಾಗಿಸುವಾಗ ಒಂದು ವಾಹನದಲ್ಲಿ 5ರಿಂದ 6 ಜಾನುವಾರು ಹಾಗೂ ಅವುಗಳಿಗೆ ಬೇಕಾಗುವ ಆಹಾರ ಮತ್ತು ನೀರು ವಾಹನದಲ್ಲಿರಬೇಕು. ಗರ್ಭ ಧರಿಸಿದ ಜಾನುವಾರುಗಳನ್ನು ಸಾಗಿಸುವಂತಿಲ್ಲ. ರಾತ್ರಿ 8 ಗಂಟೆಯಿಂದ ಬೆಳಗ್ಗೆ 6ರ ವರೆಗೆ ಯಾವುದೇ ಜಾನುವಾರು ಸಾಗಾಣಿಕೆ ಕೂಡದು. ಬೇಸಿಗೆ ಕಾಲದಲ್ಲಿ ಬೆಳಗ್ಗೆ 11ರಿಂದ ಅಪರಾಹ್ನ 3ರ ವರೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದರು.

ಪಶು ವೈದ್ಯಾಧಿಕಾರಿಗಳು ಜನರಲ್ಲಿ ಜಾನುವಾರು ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು. ಹೆಚ್ಚೆಚ್ಚು ಆರೋಗ್ಯ ಶಿಬಿರ ನಡೆಸಬೇಕು. ಗೋಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಅರಿತು ಅಗತ್ಯ ಸೌಲಭ್ಯ ನೀಡಬೇಕು. ಗ್ರಾಮಸಭೆಗಳಲ್ಲಿ ನೂತನ ಕಾಯ್ದೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯ ಸಮಪರ್ಕಕ ಅನುಷ್ಠಾನದಲ್ಲಿ ಸಹಕರಿಸಬೇಕು ಎಂದರು.

ಜಾನುವಾರುಗಳಿಗೆ ಮೇವು ಪೂರೈಕೆ ಜೊತೆಗೆ ವಿವಿಧ ಯೋಜನೆಯಡಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಜಾನುವಾರುಗಳು ಹೆಚ್ಚು ಸಂಖ್ಯೆಯಲ್ಲಿ ಕಂಡುಬಂದಲ್ಲಿ ಅವುಗಳನ್ನು ರಕ್ಷಿಸಲು ಗೋಶಾಲೆಗಳನ್ನು ಸರಕಾರದ ಗೋಮಾಳ ಜಮೀನಿನಲ್ಲಿ ನಿರ್ಮಿಸಿ, ಅಗತ್ಯ ಸೌಲಭ್ಯ ಕಲ್ಪಿಸಬೇಕು. ಇದುವರೆಗೂ ನೋಂದಣಿ ಹೊಂದದೆ ಇರುವ ಗೋಶಾಲೆಗಳನ್ನು ತ್ವರಿತವಾಗಿ ನೋಂದಾಯಿಸಿಕೊಂಡು ಸರಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.

ಗೋಶಾಲೆ ನಿರ್ವಹಣೆಗೆ ನರೇಗಾ ಯೋಜನೆಯಡಿ ಗೋಶಾಲೆ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಬಹುದು. ಗೋಮಾಳ ಜಮೀನಿನಲ್ಲಿ ಮೇವು ಬೆಳೆಸಲಾಗುತ್ತಿದ್ದು, ಅವುಗಳಿಗೆ ಸರಕಾರಿ ಅನುದಾನ ಲಭಿಸಲಿದೆ. ಒಂದು ಗೋಶಾಲೆಯಲ್ಲಿ ಕನಿಷ್ಠ 50 ಹಾಗೂ ಗರಿಷ್ಠ 200 ಜಾನುವಾರು ಇರಬೇಕು ಎಂದರು.

ಪೇತ್ರಿ ಮತ್ತು ಕೊಕ್ಕರ್ಣೆ ಪ್ರದೇಶಗಳಲ್ಲಿ ಹೆಚ್ಚು ಜಾನುವಾರುಗಳು ಕಂಡುಬರುತ್ತಿದ್ದು, ಅವುಗಳ ರಕ್ಷಣೆಗೆ ಹೆಚ್ಚಿನ ಗಮನಹರಿಸಬೇಕು, ಪಶುಪಾಲನೆ ಕುರಿತು ಯೋಜನೆ ಮತ್ತು ಅನುದಾನ ಕುರಿತು ಸಾರ್ವಜನಿಕರಿಗೆ ತಿಳಿಸಬೇಕು. ಕೊಕ್ಕರ್ಣೆ ಮತ್ತು ಪೇತ್ರಿ ಪಶು ಆಸ್ಪತ್ರೆ ಮೇಲ್ದರ್ಜೆಗೇರಿಸುವಂತೆ ಶಾಸಕ ರಘುಪತಿ ಭಟ್ ಮನವಿ ಮಾಡಿದರು.

ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಹರೀಶ ತಾಮಣಕರ್, ವಿವಿಧ ತಾಲೂಕುಗಳ ಪಶು ವೈದ್ಯಾಧಿಕಾರಿಗಳು, ಹಜ್ ಮತ್ತು ವಕ್ಫ್ ಸಮಿತಿ ಸದಸ್ಯರು ಇದ್ದರು.

ಮುಖ್ಯ ಪಶು ವೈದ್ಯಾಧಿಕಾರಿ ಡಾ. ಉದಯಕುಮಾರ್ ಸ್ವಾಗತಿಸಿ, ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!