Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಗೋಶಾಲೆ ನಿರ್ಮಾಣ: ಪ್ರತೀ ತಾಲೂಕಿನಲ್ಲಿ ಜಾಗ ಗುರುತಿಸಿ

ಗೋಶಾಲೆ ನಿರ್ಮಾಣ: ಪ್ರತೀ ತಾಲೂಕಿನಲ್ಲಿ ಜಾಗ ಗುರುತಿಸಿ

ಉಡುಪಿ: ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕನಿಷ್ಟ 1ರಿಂದ 2 ಗೋಶಾಲೆ ನಿರ್ಮಿಸಲು ಅಗತ್ಯವಿರುವ ಜಾಗ ಗುರುತಿಸಿ, ಕಾಯ್ದಿರಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ನಿಯಮ 2020 ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರೈತರು ಮತ್ತು ಸಾರ್ವಜನಿಕರು ತಮ್ಮಲ್ಲಿನ ಅನುತ್ಪಾದಕ ಜಾನುವಾರು, ಅಪಘಾತಕ್ಕೊಳಗಾದ ಜಾನುವಾರು ಮತ್ತಿತರ ಜಾನುವಾರುಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದಾಗ ಅವುಗಳನ್ನು ಪೋಷಿಸಲು ಅನುಕೂಲವಾಗುವಂತೆ ಪ್ರತಿಯೊಂದು ತಾಲೂಕಿನಲ್ಲಿ ಗೋಶಾಲೆ ಸ್ಥಾಪಿಸುವುದು ಅಗತ್ಯವಾಗಿದ್ದು, ಅದಕ್ಕಾಗಿ ಸೂಕ್ತ ಸ್ಥಳಾವಕಾಶ ಗುರುತಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಗೋಶಾಲೆ ಆರಂಭಿಸುವ ಸಂದರ್ಭ ಅದೇ ಸ್ಥಳದಲ್ಲಿ ಮೇವು ಬೆಳೆಯಲು ಸಾಧ್ಯವಿರುವ ಜಾಗ ಗುರುತಿಸುವಂತೆ ನೀಲಾವರ ಗೋಶಾಲೆ ಟ್ರಸ್ಟಿ ಡಾ. ಸರ್ವೋತ್ತಮ ಉಡುಪ ಸಲಹೆ ನೀಡಿದರು.

ಜಾನುವಾರು ಸಾಗಾಟ ಸಂದರ್ಭ ಅಗತ್ಯ ನಿಯಮ ಪಾಲಿಸುವಂತೆ ತಿಳಿಸಿದ ಡಿಸಿ ಜಗದೀಶ, ನಿಯಮ ಪಾಲನೆಗೆ ಸಂಬಂಧಿಸಿ ಆಕ್ಷೇಪಣೆ, ಸಲಹೆಗಳಿದ್ದಲ್ಲಿ ಪಡೆದು ಸರ್ಕಾರಕ್ಕೆ ತಲುಪಿಸುವಂತೆ ಪಶುಪಾಲನೆ ಇಲಾಖೆ ಉಪನಿರ್ದೇಶಕ ಹರೀಶ್ ತಾಮ್ಹಣಕರ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಗೆ ಹೊರ ರಾಜ್ಯದಿಂದ ಕೃಷಿ ಮತ್ತು ಹೈನುಗಾರಿಕೆ ಉದ್ದೇಶಗಳಿಗಾಗಿ ಜಾನುವಾರು ತರುವಾಗ ನಿಯಮಗಳಲ್ಲಿ ಸೂಕ್ತ ಅವಕಾಶ ನೀಡಬೇಕು. ಗೋಶಾಲೆಗಳಲ್ಲಿ ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಅನುಮತಿ, ಗೋಶಾಲೆಗಳ ಕಡ್ಡಾಯ ನೋಂದಣಿ, ಗೋಮಾಳ ಜಾಗದ ಅತಿಕ್ರಮಣ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು. ಅನುಮತಿ ಇಲ್ಲದೆ ಜಾನುವಾರು ಸಾಗಾಟ ವಾಹನ ಮುಟ್ಟುಗೋಲು ಹಾಕಿಕೊಳ್ಳಲು ತಹಸೀಲ್ದಾರ್ ಮತ್ತು ಉಪ ವಿಭಾಗಾಧಿಕಾರಿಗಳಿಗೆ ಅಧಿಕಾರ ನೀಡುವುದು, ಗೋಶಾಲೆಗಳಲ್ಲಿನ ಪಾಲನಾ ದರ ಹೆಚ್ಚಳ ಮತ್ತಿತರ ಸಲಹೆಗಳನ್ನು ಸದಸ್ಯರು ತಿಳಿಸಿದರು.

ಸಭೆಯಲ್ಲಿ ಎಸ್.ಪಿ ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿ. ಪಂ. ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಪಶುಪಾಲನೆ ಇಲಾಖೆಯ ವೈದ್ಯಾಧಿಕಾರಿಗಳು ಹಾಗೂ ಪ್ರಾಣಿ ದಯಾ ಸಂಘದ ಸದಸ್ಯರು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!