Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಉಡುಪಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಡ ಅಂದ್ರೆ ಹೆಂಗ್ರೀ!?

ಉಡುಪಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಡ ಅಂದ್ರೆ ಹೆಂಗ್ರೀ!?

ಉಡುಪಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಡ ಅಂದ್ರೆ ಹೆಂಗ್ರೀ!?

(ಸುದ್ದಿಕಿರಣ ವರದಿ)
ಉಡುಪಿ: ಉಡುಪಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಡ ಅಂದ್ರೆ ಹೆಂಗ್ರೀ!?
ಇದು ನಾಡಿನ ದೊರೆ ಬಸವರಾಜ ಬೊಮ್ಮಾಯಿ ಕೇಳಿದ ಪ್ರಶ್ನೆ!

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿಯರಿಂಗ್ ಘಟಕ ಬೆಂಗಳೂರು ಹಾಗೂ ಜಿಲ್ಲಾಸ್ಪತ್ರೆ ಸಹಯೋಗದೊಂದಿಗೆ ಅಜ್ಜರಕಾಡು ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಿಸಲುದ್ದೇಶಿಸಿರುವ 250 ಹಾಸಿಗೆಗಳ ಆಸ್ಪತ್ರೆಯ ವಿಸ್ತೃತ ಕಟ್ಟಡಕ್ಕೆ ಗುರುವಾರ ಶಿಲಾನ್ಯಾಸ ನೆರವೇರಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಸಕ ಭಟ್ ಬೆರ್ಕಿ!
ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಶಾಸಕ ರಘುಪತಿ ಭಟ್ ಭಾರೀ ಬೆರ್ಕಿ ಜನ ಎಂದು ತನ್ನ ಹಾವೇರಿ ಭಾಷೆಯಲ್ಲಿ ನುಡಿದ ಸಿಎಂ ಬೊಮ್ಮಾಯಿ, ನಾನು ಜಿಲ್ಲೆಗೆ ಬಂದಾಗಲೆಲ್ಲಾ ಒಂದಲ್ಲ ಒಂದು ಕಾರ್ಯಕ್ರಮ ಅಳವಡಿಸಿ, ಬೇಡಿಕೆ ಇಡುತ್ತಿದ್ದರು.

ಅದೇ ರೀತಿ ಕೋವಿಡ್ ನಿರ್ವಹಣೆ ಪರಿಶೀಲನೆಗೆ ಬರೊ ಸಂದರ್ಭ ಆಸ್ಪತ್ರೆ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಿಲ್ಲದ ಜಿಲ್ಲೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲುದ್ದೇಶಿಸಲಾಗಿದೆ. ಆ ಪಟ್ಟಿಯಲ್ಲಿ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿರುತ್ತದೆ. ನಾನೇ ಸ್ವತಃ ವೈದ್ಯಕೀಯ ಕಾಲೇಜಿಗೆ ಅಡಿಗಲ್ಲು ಹಾಕುತ್ತೇನೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

ಉಡುಪಿ ಮಂದಿ ಸಹೃದಯಿಗಳು
ಉಡುಪಿಗೂ ನನಗೂ ಯಾವುದೇ ಸಂಬಂಧ ಇದ್ದಿರಲಿಲ್ಲ. ಉಡುಪಿ ಕೃಷ್ಣನ ದರ್ಶನಕ್ಕೆ ಆಗಾಗ ಬರುತ್ತಿದ್ದುದು ಹೊರತುಪಡಿಸಿ ಜಿಲ್ಲೆಯೊಂದಿಗೆ ಯಾವುದೇ ಸಂಬಂಧವಿರಲಿಲ್ಲ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನನ್ನನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದರು. ಅವರೇಕೆ ನನ್ನನ್ನು ಉಡುಪಿಗೆ ಉಸ್ತುವಾರಿ ನೀಡಿದ್ದರೋ ಗೊತ್ತಿಲ್ಲ. ಉಡುಪಿ ಜಿಲ್ಲಾ ಉಸ್ತುವಾರಿಯಿಂದ ಮುಕ್ತಗೊಳಿಸಿ ಎಂದು ಆಗಾಗ ಕೇಳುತ್ತಿದ್ದೆ. ಆದರೆ, ಸಿಎಂ ಆಗುವ ಮೂಲಕ ಜಿಲ್ಲಾ ಉಸ್ತುವಾರಿಯಿಂದ ಮುಕ್ತನಾಗುತ್ತೇನೆ ಎಂದು ಭಾವಿಸಿರಲಿಲ್ಲ ಎಂದು ಭಾವನಾತ್ಮಕವಾಗಿ ನುಡಿದರು.

ಉಡುಪಿ ಜನತೆ ಹೃದಯ ವೈಶಾಲ್ಯತೆ ಉಳ್ಳವರು. ನಮ್ಮ ಕಷ್ಟಕ್ಕೆ ಪರಿಹಾರ ಕೇಳುತ್ತಾರೆಯೇ ಹೊರತು ವೈಯಕ್ತಿಕವಾಗಿ ಏನೂ ಕೇಳುವುದಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಪರಿಹಾರ ಕೇಳುತ್ತಾರೆ. ಇಂಥ ಜಿಲ್ಲೆಯ ಉಸ್ತುವಾರಿಯಾಗಿ ಸೇವೆ ನೀಡಿರುವುದು ನನ್ನ ಪಾಲಿನ ಸೌಭಾಗ್ಯ. ಉಡುಪಿಯ ಜನತೆ ಸದಾ ನನ್ನ ಹೃದಯದಲ್ಲಿರುತ್ತಾರೆ ಎಂದರು.

ಸರ್ಕಾರದ ನಿರ್ವಹಣೆಯಲ್ಲಿ ಬಿಆರ್.ಎಸ್ ಆಸ್ಪತ್ರೆ
ಜನರ ಹಲವು ದಶಕಗಳ ಬೇಡಿಕೆಯಂತೆ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ.

200 ಬೆಡ್ ಗಳ ಬಿಆರ್.ಎಸ್ ಆಸ್ಪತ್ರೆಯನ್ನು ಸರ್ಕಾರವೇ ವಹಿಸಿಕೊಳ್ಳಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಅದರಿಂದ ಈ ಭಾಗದ ಜನರಿಗೆ ನಿರಂತರ ಆರೋಗ್ಯ ಸೇವೆ ಲಭಿಸಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಒಳಚರಂಡಿ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕೂಡಲೇ ಅಧಿಕಾರಿಗಳ ಸಭೆ ಕರೆದು, ಮಂಜೂರಾತಿ ನೀಡಲಾಗುವುದು ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಡಾ. ಕೆ. ಸುಧಾಕರ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್, ಶಾಸಕರಾದ ರಘುಪತಿ ಭಟ್ ಮತ್ತು ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜು ಕೊಳ, ಸ್ಥಳೀಯ ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ತ್ರಿಲೋಕಚಂದ್ರ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ., ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್ ಮೊದಲಾದವರಿದ್ದರು.

ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!