`ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸರಕಾರವೇ ನಿರ್ವಹಿಸಲಿ’
(ಸುದ್ದಿಕಿರಣ ವರದಿ)
ಉಡುಪಿ: ಇಲ್ಲಿನ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯನ್ನು ಸರಕಾರವೇ ನಿರ್ವಹಿಸಲಿ ಎಂದು ಹಾಜಿ ಅಬ್ದುಲ್ಲಾ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಪಿ. ವಿ. ಭಂಡಾರಿ ಆಗ್ರಹಿಸಿದರು.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಡುಪಿಯ ಮಹಾದಾನಿ ಹಾಜಿ ಅಬ್ದುಲ್ಲಾ ತನ್ನ ಜೀವಿತಾವಧಿಯಲ್ಲಿ ಸರಕಾರಕ್ಕೆ ದಾನವಾಗಿ ನೀಡಿದ್ದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಅದಕ್ಕೆ ಸಂಬಂಧಿಸಿದ ಜಾಗವನ್ನು 2016ರಲ್ಲಿ ಅಂದಿನ ಕಾಂಗ್ರೆಸ್ ಸರಕಾರ ಅನಿವಾಸಿ ಭಾರತೀಯ ಉದ್ಯಮಿ ಡಾ| ಬಿ. ಆರ್. ಶೆಟ್ಟಿ ಅವರಿಗೆ ಪಿ.ಪಿ.ಪಿ. ಮಾದರಿಯಲ್ಲಿ ನೀಡಿತ್ತು. ಅದರ ವಿರುದ್ಧ ಹೋರಾಟ ಕೂಡಾ ಮಾಡಲಾಗಿತ್ತು ಎಂದು ಸ್ಮರಿಸಿದರು.
ಮನೆಮಾಡಿದ ಆತಂಕ
ಪ್ರಸ್ತುತ ಈ ಆಸ್ವತ್ರೆಯನ್ನು ಬಿ.ಆರ್.ಎಸ್.ನವರು ತಮ್ಮಿಂದ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸರಕಾರಕ್ಕೆ ಪತ್ರ ಬರೆದಿದ್ದಾರೆ. ಪಿಪಿಪಿ ಮಾದರಿಯ ಆಸ್ಪತ್ರೆಗಳು ಜನರಿಗೆ ಸೇವೆ ನೀಡಲು ವಿಫಲವಾಗಿರುವ ಬಗ್ಗೆ ಸರಕಾರಕ್ಕೆ ಅಂದೇ ಮಾಹಿತಿ ನೀಡಿ ಎಚ್ಚರಿಸಿದ್ದೆವು. ಅದರೂ ಆಗಿನ ಸರಕಾರ ತರಾತುರಿಯಲ್ಲಿ ಯಾವುದೇ ಮುಂದಾಲೋಚನೆ ಇಲ್ಲದೆ ನೀಡಿದ್ದರ ಫಲವಾಗಿ ಇಂದು 200 ಹಾಸಿಗೆಯ ತಾಯಿ ಮತ್ತು ಮಕ್ಕಳ ಅಸ್ಪತ್ರೆಯನ್ನು ಸರಕಾರ ಯಾವ ರೀತಿಯಲ್ಲಿ ನಿರ್ವಹಣೆ ಮಾಡಬಹುದು ಎಂಬ ಅತಂಕ ಉಡುಪಿ ಜನತೆಯಲ್ಲಿ ಮನೆ ಮಾಡಿದೆ ಎಂದರು.
ಬಡವರಿಗೆ ಸೇವೆ ಸಿಗಲಿ
ನಗರದ ಹೃದಯ ಭಾಗದಲ್ಲಿರುವ ಹಾಜಿ ಬುಡಾನ್ ಶುಶ್ರೂಷಾಲಯ ಮೊದಲಿನಂತೆ ಕಾರ್ಯನಿರ್ವಹಿಸಬೇಕು. ಹಾಜಿ ಅಬ್ದುಲ್ಲಾ ಅವರು ತನ್ನ ಜೀವಿತಾವಧಿಯಲ್ಲಿ ಆಸ್ಪತ್ರೆಗಾಗಿ ದಾನವಿತ್ತ ಸ್ಥಳವನ್ನು ಪರಭಾರೆ ಮಾಡುವುದಾಗಲೀ, ಕಟ್ಟಡವನ್ನು ಅನ್ಯರಿಗೆ ವಹಿಸಿಕೊಡುವುದಾಗಲೀ ಮಾಡಬಾರದು ಎಂದು ದಾನಪತ್ರದಲ್ಲಿ ಉಲ್ಲೇಖಿಸಿದ್ದರು ಎಂದರು.
ಟ್ರಸ್ಟ್ ಉಪಾಧ್ಯಕ್ಷ ಸೈಯ್ಯದ್ ಸಿರಾಜ್ ಅಹ್ಮದ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗೀಕರಣಗೊಳಿಸಬಾರದು. ಕಟ್ಟಡ ಸ್ಥಳಾಂತರ ಮಾಡಬಾರದು ಮತ್ತು ತನ್ನ ಹಾಗೂ ಹಾಜಿ ಬುಡಾನ್ ಹೆಸರು ಅಜರಾಮರವಾಗಿರಬೇಕು ಎಂಬುದು ಹಾಜಿ ಅಬ್ದುಲ್ಲಾ ಆಶಯವಾಗಿತ್ತು. ಆದ್ದರಿಂದ ಆಸ್ಪತ್ರೆ ನಿರ್ವಹಿಸಲು ಸಮರ್ಥವಾಗಿರುವ ರಾಜ್ಯ ಸರಕಾರ ಅದನ್ನು ಮುನ್ನಡೆಸಬೇಕು. ಆ ಮೂಲಕ ಅವರ ಆಶಯವನ್ನು ಉಳಿಸಬೇಕು. ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡದೇ ಮೆಡಿಕಲ್ ಕಾಲೇಜು ಇತ್ಯಾದಿ ಆರಂಭಿಸುವ ಮೂಲಕ ಸರಕಾರವೇ ನಡೆಸಿಕೊಂಡು ಹೋಗಿ, ಬಡವರಿಗೆ ಸೇವೆ ಸಿಗುವಂತಾಗಬೇಕು ಎಂದು ಆಶಿಸಿದರು.
ಅಬ್ದುಲ್ಲಾ ಸ್ಮರಣಾರ್ಥ ಕಾರ್ಯಕ್ರಮ
ಆ. 12 ಹಾಜಿ ಅಬ್ದುಲ್ಲಾ ಸ್ವರ್ಗಸ್ಥರಾದ ದಿನ. ಅಂದು ಅವರ ಸ್ಮರಣಾರ್ಥ ಹಾರಾಡಿ ಮತ್ತು ಹೂಡೆಯಲ್ಲಿ ಸಸಿ ನೆಡುವುದು, ಬ್ರಹ್ಮಗಿರಿಯ ವೃದ್ಧಾಶ್ರಮವೊಂದರ ಹಿರಿಯ ನಾಗರಿಕರಿಗೆ ಊಟ ನೀಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆಲವರು ಸ್ವಯಂಪ್ರೇರಿತರಾಗಿ ಜಿಲ್ಲಾಸ್ಪತ್ರೆಯಲ್ಲಿ ರಕ್ತದಾನವನ್ನೂ ಮಾಡಲಿದ್ದಾರೆ.
ಮುಂದಿನ ದಿನಗಳಲ್ಲಿ ಟ್ರಸ್ಟ್ ವತಿಯಿಂದ ಹೆಚ್ಚಿನ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುವ ಆಶಯ ಹೊಂದಲಾಗಿದೆ ಎಂದು ಡಾ. ಭಂಡಾರಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಕೋಶಾಧಿಕಾರಿ ಎಂ. ಇಕ್ಬಾಲ್ ಮನ್ನಾ, ಟ್ರಸ್ಟಿ ಹುಸೈನ್ ಕೋಡಿಬೆಂಗ್ರೆ ಇದ್ದರು