Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಸಮಾಜದ ಶಾಂತಿ ಕಾಪಾಡುವಲ್ಲಿ ಗೃಹರಕ್ಷಕರ ಕೊಡುಗೆ ಅಪಾರ

ಸಮಾಜದ ಶಾಂತಿ ಕಾಪಾಡುವಲ್ಲಿ ಗೃಹರಕ್ಷಕರ ಕೊಡುಗೆ ಅಪಾರ

ಉಡುಪಿ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕ ದಳ, ಪೊಲೀಸರಿಗೆ ಸಮನ್ವಯದೊಂದಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಇಲ್ಲಿನ ಜಿಲ್ಲಾ ಗೃಹರಕ್ಷಕ ದಳದ ಕಚೇರಿ ಆವರಣದಲ್ಲಿ ಶುಕ್ರವಾರ ನಡೆದ ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಗೃಹರಕ್ಷಕ ದಳ ದಿನಾಚರಣೆ ರಕ್ತದಾನ ಮಾಡುವ ಮೂಲಕ ಆಚರಿಸುತ್ತಿರುವುದು ಉತ್ತಮ ವಿಚಾರ. ಓರ್ವ ವ್ಯಕ್ತಿ ರಕ್ತದಾನ ಮಾಡುವ ಮೂಲಕ ನಾಲ್ವರ ಜೀವ ಉಳಿಸಿದಂತಾಗುತ್ತದೆ. ರಕ್ತದಾನದಲ್ಲಿ ಉಡುಪಿ ಮಾದರಿ ಜಿಲ್ಲೆಯಾಗಿದ್ದು, ಈ ನಿಟ್ಟಿನಲ್ಲಿ ಕೈಜೋಡಿಸಿದ ಗೃಹರಕ್ಷಕರಿಗೆ ಅಭಿನಂದಿಸುವುದಾಗಿ ತಿಳಿಸಿದರು.

ತುರ್ತು ಸಂದರ್ಭದಲ್ಲಿ ಸಮಾಜದಲ್ಲಿ ಶಾಂತಿ ಕಾಪಾಡುವಲ್ಲಿ ಗೃಹರಕ್ಷಕ ದಳದವರ ಪಾತ್ರ ಬಹಳ ಮುಖ್ಯ. ಇಂಥ ಸಂದರ್ಭದಲ್ಲಿ ಅತ್ಯಂತ ಕಾಳಜಿ ವಹಿಸಿ, ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಸೇವೆ ಸಲ್ಲಿಸುತ್ತಿದ್ದು, ಪೊಲೀಸ್ ಇಲಾಖೆ ಸೂಚಿಸಿದ ಕರ್ತವ್ಯಗಳನ್ನು ಸಮನ್ವಯದೊಂದಿಗೆ ನಿರ್ವಹಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ ಎಂದರು.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗೃಹರಕ್ಷಕರ ಕೊಡುಗೆ ಅವಿಸ್ಮರಣೀಯ. ಕಾಪು ಬೀಚಿನಲ್ಲಿ ಡಾ. ಪ್ರಶಾಂತ ಶೆಟ್ಟಿ ನೇತೃತ್ವದಲ್ಲಿ ಉತ್ತಮ ಕೆಲಸ ನಿರ್ವಹಣೆ ತೋರುತ್ತಿದ್ದು, ಮಲ್ಪೆ ಬೀಚ್ ನಲ್ಲಿ ಈಜು ಪರಿಣಿತಿ ಹೊಂದಿರುವ ಗೃಹ ರಕ್ಷಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಪ್ರವಾಸೋದ್ಯಮ ಕ್ಷೇತ್ರ ರಕ್ಷಣೆ ಜೊತೆಗೆ ಸಾರ್ವಜನಿಕರ ರಕ್ಷಣೆ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಗೃಹ ರಕ್ಷಕರು ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗದಂತೆ ಕೆಲಸ ನಿರ್ವಹಿಸುತ್ತಿದ್ದು, ಗೃಹ ರಕ್ಷಕ ದಳದ ಸಿಬ್ಬಂದಿಗಳು ಸಮಾಜ ಮತ್ತು ನಾಗರಿಕರ ರಕ್ಷಣೆಗೆ ಬದ್ಧರಾಗಿದ್ದಾರೆ ಎಂದರು.

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಗೃಹರಕ್ಷಕ ದಳದ ಸ್ವಯಂಸೇವಕರ ತ್ಯಾಗ ಮೆಚ್ಚುವಂಥದ್ದು. ಈ ನಿಟ್ಟಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಕೊಡುಗೆ ಅಪಾರ ಎಂದರು.

ಅಧ್ಯಕ್ಷತೆ ವಹಿಸಿದ ಜಿಲ್ಲಾ ಕಮಾಂಡೆಂಟ್ ಡಾ. ಕೆ. ಪ್ರಶಾಂತ್ ಶೆಟ್ಟಿ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 500 ಮಂದಿ ಗೃಹ ರಕ್ಷಕರು ಕಾರ್ಯನಿರ್ವಹಿಸುತ್ತಿದ್ದು ಉಡುಪಿ, ಮಣಿಪಾಲ, ಕಾಪು, ಪಡುಬಿದ್ರೆ, ಕಾರ್ಕಳ, ಬ್ರಹ್ಮಾವರ, ಕುಂದಾಪುರ ಹಾಗೂ ಬೈಂದೂರು ಒಟ್ಟು 8 ಘಟಕಗಳಿವೆ. ಅಲ್ಲದೆ ಪ್ರವಾಸೋದ್ಯಮ ಇಲಾಖೆ, ಆರ್.ಟಿ.ಓ., ಎನ್.ಸಿ.ಸಿ., ಕಾರಾಗೃಹದಲ್ಲಿ ಗೃಹರಕ್ಷಕ ದಳದವರು ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಧೈರ್ಯದಿಂದ ಕಾರ್ಯನಿರ್ವಹಿಸಿ, ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದರು.

ಗೃಹರಕ್ಷಕ ದಳ ದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ನಡೆಯಿತು.

ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್, ಉಪಾಧೀಕ್ಷಕ ಜಯಶಂಕರ, ವೃತ್ತ ನಿರೀಕ್ಷಕ ಮಂಜುನಾಥ, ಕಾನ್ಸ್ ಟೇಬಲ್ ಸಂತೋಷ್ ಮತ್ತು ಜಿಲ್ಲಾ ಕಮಾಂಡೆಂಟ್ ಡಾ. ಪ್ರಶಾಂತ ಶೆಟ್ಟಿ ಹಾಗೂ ಕಳೆದ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಕೃಷ್ಣ ಪ್ರಸಾದ್ ಕೂಡ್ಲು ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಗೃಹ ರಕ್ಷಕ ದಳದ ಸೆಕೆಂಡ್ ಇನ್ ಕಮಾಂಡ್ ಕೆ. ಸಿ. ರಾಜೇಶ್ ಸ್ವಾಗತಿಸಿದರು. ಪ್ರಥಮ ದರ್ಜೆ ಸಹಾಯಕಿ ಶ್ಯಾಮಲ ವಂದಿಸಿದರು. ಸಾಯಿನಾಥ್ ಉದ್ಯಾವರ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!