ಉಡುಪಿ: ಜಿಲ್ಲೆಯ ಪಡಿತರ ಅಂಗಡಿಗಳಲ್ಲಿ ವಿತರಿಸಲಾಗುತ್ತಿರುವ ಬಿಳಿ ಕುಚ್ಚಿಗೆ ಅಕ್ಕಿ ಗುಣಮಟ್ಟದ್ದಾಗಿದ್ದು, ಅದರ ಬದಲಿಗೆ ಉತ್ತಮ ಗುಣಮಟ್ಟದ ಕುಚ್ಚಿಗೆ ಅಕ್ಕಿ ಪೂರೈಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸೂಚಿಸಿದರು.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಡಿತರ ವ್ಯವಸ್ಥೆಯಲ್ಲಿ ಜಿಲ್ಲೆಗೆ ಕುಚ್ಚಿಗೆ ಅಕ್ಕಿ ನೀಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲೆಗೆ ಕುಚ್ಚಿಗೆ ಅಕ್ಕಿ ಸರಬರಾಜಾಗುತ್ತಿದೆ. ಆದರೆ, ಈ ಅಕ್ಕಿಯ ಗುಣಮಟ್ಟ ಸರಿ ಇಲ್ಲ ಎಂದು ಸಾರ್ವಜನಿಕರಿಂದ ದೂರು ಕೇಳಿಬರುತ್ತಿದೆ. ಉತ್ತಮ ಗುಣಮಟ್ಟದ ಕೆಂಪು ಕುಚ್ಚಿಗೆ ಅಕ್ಕಿ ವಿತರಿಸಲು ಆಹಾರ ನಿಗಮಕ್ಕೆ ಪತ್ರ ಬರೆಯುವಂತೆ ಸೂಚಿಸಿದರು.
ಜಿಲ್ಲೆಗೆ ಪ್ರಸ್ತುತ ಆಂಧ್ರಪ್ರದೇಶದಿಂದ ಅಕ್ಕಿ ಸರಬರಾಗುತ್ತಿದೆ. ಪಡಿತರ ಸರಬರಾಜು ವ್ಯವಸ್ಥೆಗೆ ಅಗತ್ಯ ಪ್ರಮಾಣದಲ್ಲಿ ಸ್ಥಳೀಯ ಕುಚ್ಚಿಗೆ ಅಕ್ಕಿ ದೊರೆಯುತ್ತಿಲ್ಲ ಎಂದು ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಬೇರೆ ರಾಜ್ಯಗಳಲ್ಲಿ ಕೆಂಪು ಕುಚ್ಚಿಗೆ ಬೆಳೆಯುತ್ತಿದ್ದಲ್ಲಿ ಆ ಅಕ್ಕಿಯನ್ನು ಜಿಲ್ಲೆಗೆ ಸರಬರಾಜು ಮಾಡಲು ಆಹಾರ ನಿಗಮಕ್ಕೆ ಪತ್ರ ಬರೆಯುವಂತೆ ಅಧ್ಯಕ್ಷ ದಿನಕರಬಾಬು ಸೂಚಿಸಿದರು.
ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತಂತೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ ತಿಳಿಸಿದರು.
ಜಿಲ್ಲೆಗೆ ಸರಬರಾಜಾಗುವ ಪ್ಲಾಸ್ಟಿಕ್ ನಿಷೇಧಿಸಿದಲ್ಲಿ ಸಮರ್ಪಕ ಅನುಷ್ಠಾನ ಸಾಧ್ಯವಾಗಲಿದೆ. ಆದ್ದರಿಂದ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಸರಬರಾಜು ಮಾಡುವ ಸಗಟು ವ್ಯಾಪಾರಿಗಳ ಬಳಿ ಇರುವ ಪ್ಲಾಸ್ಟಿಕ್ ವಶಪಡಿಸಿಕೊಳ್ಳುವಂತೆ ನಗರಾಭಿವೃದ್ಧಿ ಕೋಶ ಅಧಿಕಾರಿಗಳಿಗೆ ಸೂಚಿಸಿದ ಅಧ್ಯಕ್ಷರು, ಗ್ರಾಮೀಣ ಪ್ರದೇಶದಲ್ಲಿ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲಾ ತಾ. ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ಪ್ಲಾಸ್ಟಿಕ್ ಚೀಲಗಳ ದರ ಕಡಿಮೆ ಇರುವುದರಿಂದ ಅದಕ್ಕೆ ಪರ್ಯಾಯವಾಗಿ ಅದೇ ದರದಲ್ಲಿ ಬಟ್ಟೆಯ ಉತ್ಪನ್ನ ಸರಬರಾಜು ಮಾಡಿದ್ದಲ್ಲಿ ಪ್ಲಾಸ್ಟಿಕ್ ನಿಷೇಧ ಸಾಧ್ಯವಾಗಲಿದೆ. ಆ ಬಗ್ಗೆ ಅಧಿಕಾರಿಗಳು ಯೋಜನೆ ರೂಪಿಸುವಂತೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ ಸಲಹೆ ನೀಡಿದರು.
ಜಲ ಜೀವನ್ ಮಿಷನ್ ಯೋಜನೆಯಡಿ ನೀರಿನ ಸಂಪರ್ಕ ನೀಡುವಾಗ ಶಾಲೆಗಳು ಮತ್ತು ಅಂಗನವಾಡಿಗಳಿಗೂ ಸಂಪರ್ಕ ನೀಡುವಂತೆ ತಿಳಿಸಿದ ಅಧ್ಯಕ್ಷರು, ದಿವ್ಯಾಂಗರಿಗೆ ಮೀಸಲಿಟ್ಟಿರುವ ಅನುದಾನದಲ್ಲಿ ದಿವ್ಯಾಂಗರಿಗೆ ಅಗತ್ಯವಿರುವ ಸೌಲಭ್ಯ ಒದಗಿಸಿ, ಅನುದಾನದ ಸಂಪೂರ್ಣ ಸದ್ವಿನಿಯೋಗ ಮಾಡಬೇಕು. ಎಲ್ಲಾ ಇಲಾಖೆಗಳು ನಿಗದಿತ ಅವಧಿಯೊಳಗೆ ಗುರಿ ಸಾಧಿಸಲು ಕಾರ್ಯೋನ್ಮುಖರಾಗಬೇಕು ಎಂದರು.
ಸಭೆಯಲ್ಲಿ ಜಿ. ಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಪುತ್ರನ್, ಜಿ. ಪಂ. ಸಿಇಓ ಡಾ. ನವೀನ ಭಟ್, ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಇದ್ದರು.
ಗುಣಮಟ್ಟದ ಕುಚ್ಚಿಗೆ ಅಕ್ಕಿ ಪೂರೈಸಲು ಸೂಚನೆ
ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...