Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ದೇವನೊಲುಮೆಗೆ ಗುರು ಕರುಣೆ ಅಗತ್ಯ

ದೇವನೊಲುಮೆಗೆ ಗುರು ಕರುಣೆ ಅಗತ್ಯ

ಉಡುಪಿ: ಭಗವಂತನನ್ನು ಒಲಿಸಿಕೊಳ್ಳಲು ಗುರುಗಳ ಪ್ರೀತಿಗೆ ಪಾತ್ರರಾಗಬೇಕು. ಹಾಗೆ ಆಗಲು ಗುರುಗಳನ್ನು ಚೆನ್ನಾಗಿ ಅರಿತುಕೊಳ್ಳಬೇಕು ಎಂದು ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಪರ್ಯಾಯ ಅದಮಾರು ಶ್ರೀಕೃಷ್ಣಮಠ ಆಶ್ರಯದಲ್ಲಿ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ನಡೆಯುತ್ತಿರುವ ಪರ್ಯಾಯ ಪಂಚಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಡುಪಿಯ ಎಲ್ಲ `ಮೊದಲು’ಗಳಿಗೆ ನಮ್ಮ ಗುರುಗಳಾದ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಕಾರಣ. ಅವರ 25ರ ಹರೆಯದಲ್ಲಿಯೇ ರಥಬೀದಿಗೆ ಕಾಂಕ್ರೀಟ್ ಹಾಕಿಸಿದ್ದರು. ಶಿಕ್ಷಣ ಸಂಸ್ಥೆ ಕಟ್ಟಿದ್ದರು. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಿಗೆ ಭದ್ರ ಬುನಾದಿ ಹಾಕಿದ್ದರು ಎಂದು ಸ್ಮರಿಸಿದರು.

ಪ್ರಾಮಾಣಿಕವಾಗಿ ದೇವರಲ್ಲಿ ಪ್ರಾರ್ಥಿಸಿದಲ್ಲಿ ಖಂಡಿತಾ ಇಂಬು ಸಿಗುತ್ತದೆ ಎಂದು ದೃಢವಾಗಿ ನಂಬಿದ್ದ ಶ್ರೀ ವಿಬುಧೇಶತೀರ್ಥರು ದೇಹಕ್ಕಿಂತ ದೇವ ಮತ್ತು ದೇಶ ಮುಖ್ಯ ಎಂದು ನಂಬಿ ನಡೆದಿದ್ದ ಮಹಾನುಭಾವರು ಎಂದು ಬಣ್ಣಿಸಿದರು.

ಅದಮಾರು ಮಠ ಬಗ್ಗೆ ವಿಜಯಸಿಂಹ ಆಚಾರ್ಯ, ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತಾಯ ಮತ್ತು ಅದಮಾರು ಮಠದೊಂದಿಗಿನ ಒಡನಾಟವನ್ನು ಮಠದ ವ್ಯವಸ್ಥಾಪಕ ಗೋವಿಂದರಾಜ್ ಎಳೆಎಳೆಯಾಗಿ ತೆರೆದಿಟ್ಟರು.

ಸಾಧಕರಿಗೆ ಸನ್ಮಾನ
ಬಳಿಕ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಸಾನ್ನಿಧ್ಯದಲ್ಲಿ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆ ಜೋಗಿ ಸಮಾಜ, ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ, ಉಡುಪಿ ಜಿಲ್ಲೆ ಮೊಗವೀರ ಯುವ ಸಂಘಟನೆ, ನವಚೈತನ್ಯ ಯುವಕ ಮಂಡಲ ಶೀಂಬ್ರ, ಮಲ್ಪೆ ಮೀನುಗಾರರ ಸಂಘ, ನಿವೃತ್ತ ಸರಕಾರಿ ಅಧಿಕಾರಿ ಶಾಂತರಾಜ ರಾವ್, ಬ್ರಹ್ಮಾವರದ ಪಶು ನಾಟಿವೈದ್ಯ ಗೋವಿಂದ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿ ಮಹಾಪ್ರಬಂಧಕ ಯೋಗೀಶ್ ಆಚಾರ್ಯ ಅಭ್ಯಾಗತರಾಗಿದ್ದರು.

ಶ್ರೀಕೃಷ್ಣ ಸೇವಾ ಬಳಗದ ವೈ. ಎನ್. ರಾಮಚಂದ್ರ ರಾವ್ ವಂದಿಸಿದರು.

ಭಕ್ತಿ ಸಂಗೀತ
ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಚೇತನ್ ರಂಗಸ್ವಾಮಿ ಅವರಿಂದ ಭಕ್ತಿ ಸಂಗೀತ ನಡೆಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!