ಬೆಂಗಳೂರು: ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಪತ್ರಕರ್ತ ಎಚ್. ಎಸ್. ದೊರೈಸ್ವಾಮಿ ಹೃದಯಾಘಾತದಿಂದ ಇಲ್ಲಿನ ಜಯದೇವ ಆಸ್ಪತ್ರೆಯಲ್ಲಿ ಬುಧವಾರ ಕೊನೆಯುಸಿರೆಳೆದರು. ಅವರು ಕಳೆದ ಏ. 10ರಂದು 103ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.
ಈಚೆಗೆ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಆದರೆ, ಮತ್ತೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು.
1918ರ ಏ. 10ರಂದು ಹಾರೋಹಳ್ಳಿಯಲ್ಲಿ ಜನಿಸಿದ್ದ ದೊರೈಸ್ವಾಮಿ, ಗಾಂಧೀಜಿ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮಿಕಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಅಪ್ಪಟ ಗಾಂಧಿವಾದಿಯಾಗಿದ್ದ ಅವರು, ಖಾದಿವಸ್ತ್ರಗಳನ್ನೇ ಧರಿಸುತ್ತಿದ್ದರು.
ಸುಮಾರು 2 ವರ್ಷ ಕಾಲ ನಾಡಿನ ಹಿರಿಯ ಪತ್ರಿಕೆಯಾದ ಸಂಯುಕ್ತ ಕರ್ನಾಟಕದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಆಗಿದ್ದರು.
ಗಾಂಧಿ ಸೇವಾ ಪ್ರಶಸ್ತಿ, ಬಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರೈಸ್ವಾಮಿ ಅವರನ್ನು ಅರಸಿಬಂದಿತ್ತು.