ಉಡುಪಿ: ಇಲ್ಲಿಗೆ ಸಮೀಪದ ಪರ್ಕಳ ಬಸ್ ನಿಲ್ದಾಣ ಪಕ್ಕದಲ್ಲಿ ಸುಮಾರು 70- 80 ವರ್ಷಗಳಷ್ಟು ಹಳೆಯದಾದ ಕಟ್ಟಡವನ್ನು ತೆರವುಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ಗಣೇಶರಾಜ್ ಸರಳೇಬೆಟ್ಟು ಅವರು ನಗರಸಭೆಯನ್ನು ಆಗ್ರಹಿಸಿದ್ದಾರೆ.
ಬಿರುಕು ಬಿಟ್ಟು ಶಿಥಿಲವಾಗಿರುವ ಕಟ್ಟಡದ ಹಿಂಭಾಗ ನೆಲಸಮವಾಗಿದೆ. ರಸ್ತೆಯ ಮುಂಭಾಗದ ಪ್ರಮುಖ ಭಾಗದಲ್ಲಿರುವ ಒಂದು ಅಂತಸ್ತಿನ ಹಳೆಯ ಕಟ್ಟಡದಲ್ಲಿಯೂ ಬಿರುಕು ಕಾಣಿಸಿದ್ದು, ಗಿಡಗಂಟಿಗಳು ಬೆಳೆದಿವೆ. ಈ ಕಟ್ಟಡದಲ್ಲಿ ಹಿಂದೆ ಇದ್ದ ಅಂಗಡಿ ಇದೀಗ ಮುಚ್ಚಲ್ಪಟ್ಟಿದ್ದು, ಯಾರೂ ವಾಸ ಮಾಡದೆ ಇರುವುದು ಕಟ್ಟಡದ ಈ ಸ್ಥಿತಿಗೆ ಕಾರಣವಾಗಿದೆ.
ನಗರಸಭೆ ವ್ಯಾಪ್ತಿಗೊಳಪಟ್ಟ ರಾಷ್ಟ್ರೀಯ ಹೆದ್ದಾರಿ 169 ಎ ಮಗ್ಗುಲಲ್ಲಿ ಕಟ್ಟಡ ಇರುವುದರಿಂದ ಮತ್ತು ಘನವಾಹನಗಳು ದಿನನಿತ್ಯ ಕಟ್ಟಡದ ಮುಂಭಾಗದಿಂದಲೇ ಸಂಚರಿಸುವುವುದರಿಂದ ಈಚೆಗೆ ಉಡುಪಿಯಲ್ಲಿ ನಡೆದ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟಡ ಮಾಲೀಕರಿಗೆ ನೋಟಿಸು ನೀಡಿ ಸುರಕ್ಷತಾ ಕ್ರಮ ಕೈಗೊಂಡು ಕಟ್ಟಡ ತೆರವುಗೊಳಿಸುವಂತೆ ಸರಳೇಬೆಟ್ಟು ಆಗ್ರಹಿಸಿದ್ದಾರೆ.