ಉಡುಪಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವುದ್ ಅಬೂಬಕ್ಕರ್ ನೇತೃತ್ವದಲ್ಲಿ ಶಂಕರಪುರದ ಏಸುಪುರ ಬೆಥೆಲ್ ಆಶ್ರಮದ ಸುಮಾರು 270 ಮಂದಿ ಮಾನಸಿಕ ಮತ್ತು ದೈಹಿಕ ಆಶಕ್ತ ನಿವಾಸಿಗಳಿಗೆ ಕ್ರಿಸ್ ಮಸ್ ಸಂದರ್ಭದಲ್ಲಿ ಹಣ್ಣು ಹಂಪಲು ಮತ್ತು ದಿನಸಿ ವಸ್ತುಗಳನ್ನು ನೀಡಲಾಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಮತ್ತು ಉಡುಪಿ ಶಾಸಕ ಕೆ. ರಘುಪತಿ ಭಟ್ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಸಲಾಯಿತು.
ಏಸುಪುರ ಬೆಥೆಲ್ ನ ಪಾಸ್ಟರ್ ಸುನಿಲ್ ಜಾನ್ ಡಿ’ಸೋಜ ಮಾತನಾಡಿ ಬಡಬಗ್ಗರು, ದೀನರು, ಸಮಾಜದಲ್ಲಿ ಕಡೆಗಣನೆಗೊಳಪಟ್ಟವರು, ಮನೆಗಳಿಂದ ದೂರ ಮಾಡಲ್ಪಟ್ಟವರು, ಸ್ವಂತ ಜನರಿಂದ ತುಳಿತಕ್ಕೊಳಪಟ್ಟು
ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡು ಮಾರ್ಗಮಧ್ಯದಲ್ಲಿ ತಿರುಗಾಡುತ್ತಿರುವ ಕುಂಟರು, ಕುರುಡರು, ಮಾನಸಿಕ ಅಸ್ವಸ್ಥರನ್ನು ತಂದು ಆಶ್ರಮದಲ್ಲಿ ಸಾಕಿ ಸಲಹಲಾಗುತ್ತಿದೆ. ಉಳ್ಳವರು ಮತ್ತು ಮಾನವೀಯ ಕಳಕಳಿಯ ವ್ಯಕ್ತಿಗಳು ಕೈಜೋಡಿಸಿರುತ್ತಿರುವುದು ಸಂತೋಷದಾಯಕ ಎಂದರು.
ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವುದ್ ಅಬೂಬಕ್ಕರ್, ಪ್ರಧಾನ ಕಾರ್ಯದರ್ಸಿಗಳಾದ ಅಲ್ವಿನ್ ಡಿ’ಸೋಜ ಪರ್ಕಳ ಮತ್ತು ಆಸೀಫ್ ಶೇಖ್ ಕಟಪಾಡಿ, ಉಪಾಧ್ಯಕ್ಷ ಅಫ್ಸರ್ ಶೇಖ್ ಹೆಜಮಾಡಿ, ರುಡಾಲ್ಫ್ ಡಿ’ಸೋಜ, ಕಾರ್ಯದರ್ಶಿ ಗ್ರೆಟ್ಟಾ ಮಸ್ಕರೇನಸ್ ಮಣಿಪಾಲ ಮೊದಲಾದವರಿದ್ದರು