Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಹೆಜಮಾಡಿಕೋಡಿ ಮೀನುಗಾರಿಕೆ ಬಂದರು ಶಿಲಾನ್ಯಾಸ

ಹೆಜಮಾಡಿಕೋಡಿ ಮೀನುಗಾರಿಕೆ ಬಂದರು ಶಿಲಾನ್ಯಾಸ

ಪಡುಬಿದ್ರಿ: ಮೀನುಗಾರಿಕೆ ಇಲಾಖೆ ಆಶ್ರಯದಲ್ಲಿ ಸುಮಾರು 181 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಲಾಗಿರುವ ಹೆಜಮಾಡಿಕೋಡಿ ಮೀನುಗಾರಿಕೆ ಬಂದರು ಕಾಮಗಾರಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಂಗಳವಾರ ಶಿಲಾನ್ಯಾಸ ಮಾಡಿದರು. ಆ ಮೂಲಕ ಈ ಭಾಗದ ಮೀನುಗಾರರ ನಿಡುಗಾಲದ ಬೇಡಿಕೆ ಈಡೇರಿಸಿದರು.

ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, 180.84 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಬಂದರು ಕಾಮಗಾರಿಗೆ ಕಳೆದ ಬಜೆಟ್ ನಲ್ಲಿಯೇ ಹಣ ಮೀಸಲಿಡಲಾಗಿತ್ತು. ಆದರೆ, ಭೂಸ್ವಾಧೀನ ಇತ್ಯಾದಿ ಪ್ರಕ್ರಿಯೆಗಳ ಕಾರಣದಿಂದಾಗಿ ಕಾಮಗಾರಿ ಆರಂಭಿಸುವುದು ವಿಳಂಬವಾಯಿತು.

ಭೂಸ್ವಾಧೀನ ಪ್ರಕ್ರಿಯೆಗಾಗಿ 180.84 ಕೋ. ರೂ. ಮೀಸಲಿಟ್ಟಿದ್ದು, ಒಟ್ಟು ವೆಚ್ಚದ ಪೈಕಿ 69.30 ಕೋ. ರೂ. ಕೇಂದ್ರ ಸರಕಾರದ ಅನುದಾನವಾಗಿದ್ದು, ಆ ಪೈಕಿ 13.68 ಕೋ. ರೂ. ಬಿಡುಗಡೆಯಾಗಿದೆ. ಪ್ರಸ್ತುತ ಕಾಮಗಾರಿಗೆ ಹಣಕಾಸು ಕೊರತೆ ಇಲ್ಲ. ಮುಂದಿನ ಎರಡು ವರ್ಷದಲ್ಲಿ ಕಾಮಗಾರಿ ಪೂರೈಸಬೇಕಾಗಿದ್ದು, ಗುಣಮಟ್ಟದಲ್ಲಿ ರಾಜೀ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮೀನುಗಾರರ ಸುರಕ್ಷತೆಗೆ ಆದ್ಯತೆ
ಮೀನುಗಾರರ ಸುರಕ್ಷತೆಗೆ ರಾಜ್ಯ ಸರಕಾರ ಆದ್ಯತೆ ನೀಡಲಿದೆ. ರಾಜ್ಯದ 320 ಕಿ. ಮೀ. ವ್ಯಾಪ್ತಿಯ ಕರಾವಳಿಯ ಮೀನುಗಾರರ ಬೇಡಿಕೆ ಈಡೇರಿಸಲು ಸರಕಾರ ಬದ್ಧ. 2020- 21ನೇ ಆಯವ್ಯಯದಲ್ಲಿ ಮೀನುಗಾರಿಕೆ ಇಲಾಖೆಗೆ 251.57 ಕೋ. ರೂ. ತೆಗೆದಿರಿಸಲಾಗಿತ್ತು. ಮೀನುಗಾರ ಮಹಿಳೆಯರಿಗೆ ನಿಬಡ್ಡಿ ಸಾಲ, ಸಾಲ ಮನ್ನಾ ಇತ್ಯಾದಿ ಯೋಜನೆ ಜಾರಿಗೊಳಿಸಲಾಗಿದೆ. 135 ಕೋ. ರೂ. ಡೀಸೆಲ್ ಸಬ್ಸಿಡಿ ನೀಡಲಾಗಿದೆ ಎಂದರು.

ಯಾಂತ್ರೀಕೃತ ದೋಣಿಯಲ್ಲಿ ದೇಸೀಯತೆ
ಪ್ರಾಸ್ತಾವಿಕವಾಗಿ ಮಾತನಾಡಿದ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಹೆಜಮಾಡಿಕೋಡಿ ಬಂದರು ಆಗಬೇಕೆಂಬ ಸುಮಾರು 4 ದಶಕಗಳ ಬೇಡಿಕೆ ಈಡೇರುತ್ತಿದೆ.

ಸರಕಾರ ಮೀನುಗಾರರಿಗಾಗಿ ವಿವಿಧ ಯೋಜನೆ ಜಾರಿಗೆ ತಂದಿದೆ. 23 ಸಾವಿರ ಮೀನುಗಾರ ಮಹಿಳೆಯರಿಗೆ 61 ಕೋ. ರೂ. ಸಾಲ ಮನ್ನಾ ಮಾಡಲಾಗಿದೆ. ತಾಂತ್ರಿಕ ಕಾರಣಗಳಿಂದಾಗಿ 7 ಸಾವಿರ ಮಂದಿಯ ಬ್ಯಾಂಕ್ ಖಾತೆಗೆ ಹಣ ಪಾವತಿಗೆ ತೊಡಕಾಗಿದ್ದು, ಈ ತಿಂಗಳಾಂತ್ಯದೊಳಗೆ ಅದೂ ಈಡೇರಲಿದೆ ಎಂದರು.

ಚೀನಾ ನಿರ್ಮಿತ ಯಾಂತ್ರೀಕೃತ ಬೋಟುಗಳ ಬದಲಾಗಿ ದೇಸೀ ನಿರ್ಮಿತ ಬೋಟುಗಳ ಬಳಕೆಗೆ 2 ತಿಂಗಳ ಕಾಲಾವಕಾಶ ಕೋರಲಾಗಿದೆ. ವಿವಿಧ ಕಂಪೆನಿಗಳೂ ಪೂರಕವಾಗಿ ಸ್ಪಂದಿಸಿದ್ದು, ಪ್ರಧಾನಿ ಪರಿಕಲ್ಪನೆಯ ಮೇಕ್ ಇನ್ ಇಂಡಿಯಾ ಯೋಜನೆಯಡಿ ಮುಂದಿನ ಕೆಲವೇ ವರ್ಷಗಳಲ್ಲಿ ಎಲ್ಲ ಯಾಂತ್ರೀಕೃತ ಬೋಟುಗಳ ಇಂಜಿನ್ ಗಳನ್ನು ಭಾರತದಲ್ಲೇ ಸಿದ್ಧಪಡಿಸಲಾಗುವುದು ಎಂದರು.

ಪ್ರಸ್ತುತ ಕರ್ನಾಟಕ ಸಮುದ್ರ ಮೀನುಗಾರಿಕೆಯಲ್ಲಿ 4 ಮತ್ತು ಒಳನಾಡು ಮೀನುಗಾರಿಕೆಯಲ್ಲಿ 9ನೇ ಸ್ಥಾನದಲ್ಲಿದೆ ಎಂದು ಸಚಿವ ಕೋಟ ತಿಳಿಸಿದರು.

ಸ್ಥಳೀಯರಿಗೆ ಉದ್ಯೋಗ
ಕಾಪು ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಸುಸಜ್ಜಿತ ಬಂದರು ನಿರ್ಮಾಣಕ್ಕೆ ಪ್ರಾಕೃತಿಕವಾಗಿ ಅನುಕೂಲತೆಗಳಿದ್ದರೂ ಕಾಮಗಾರಿಗೆ ವಿಳಂಬವಾಯಿತು. 181 ಕೋ. ರೂ. ಯೋಜನೆಯ ಹೆಜಮಾಡಿಕೋಡಿ ಸರ್ವಋತು ಮೀನುಗಾರಿಕೆ ಬಂದರು ಆಗಲಿದ್ದು, ಮೀನುಗಾರಿಕೆ ಇಲಾಖೆ ಅಧೀನದ ಸುಮಾರು 70 ಎಕರೆ ಜಾಗದಲ್ಲಿ ಸುಸಜ್ಜಿತ ಮೀನುಗಾರಿಕೆ ಜೆಟ್ಟಿ, ಬ್ರೇಕ್ ವಾಟರ್ ಸೌಲಭ್ಯ, ಬೋಟ್ ರಿಪೇರಿ ಶೆಡ್, ಹರಾಜು ಮಳಿಗೆ, ವರ್ಕ್ ಮನ್ ಶೆಡ್, ಕಚೇರಿ ಸೇರಿದಂತೆ ವಿವಿಧ ಕಾಮಗಾರಿ ಸಹಿತ ಸುಸಜ್ಜಿತ ಬಂದರು ನಿಮರ್ಾಣವಾಗಲಿದೆ. ಈ ಯೋಜನೆಯಿಂದ ಸ್ಥಳೀಯರಿಗೆ ಸಾಕಷ್ಟು ಉದ್ಯೋಗಾವಕಾಶ ಲಭಿಸಲಿದೆ ಎಂದರು.

2 ವರ್ಷದೊಳಗೆ ಪೂರೈಸಲು ತಾಕೀತು
ಮೊಗವೀರ ಮುಂದಾಳು, ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಮಾತನಾಡಿ, ಉದ್ದೇಶಿತ ಕಾಮಗಾರಿ 3 ವರ್ಷದೊಳಗೆ ಪೂರೈಸಬೇಕೆಂದಿದ್ದರೂ ಎರಡು ವರ್ಷದಲ್ಲಿ ಪೂರೈಸುವಂತೆ ಕಾಮಗಾರಿ ವಹಿಸಿಕೊಂಡ ಸಂಸ್ಥೆಗೆ ಸೂಚನೆ ನೀಡುವಂತೆ ವಿನಂತಿಸಿದರು. ಮೀನುಗಾರ ಮಹಿಳೆಯರ ಬಾಕಿ ಹಣ ಪಾವತಿ, ಮೀನುಗಾರರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾವನೆಗೆ ವೇಗದ ಚಾಲನೆ ನೀಡುವಂತೆ ಆಗ್ರಹಿಸಿದರು.

ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್ ಮತ್ತು ಉಮಾನಾಥ ಕೋಟ್ಯಾನ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ, ಜಿ. ಪಂ. ಅಧ್ಯಕ್ಷ ದಿನಕರಬಾಬು, ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಜೀವರಾಜ್, ಕಾಪು ತಾ. ಪಂ. ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಮಂಗಳೂರು ಮೀನುಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ, ಜಿ. ಪಂ. ಸದಸ್ಯ ಶಶಿಕಾಂತ ಪಡುಬಿದ್ರಿ, ಕಾಪು ತಾ. ಪಂ. ಸದಸ್ಯೆ ರೇಣುಕಾ ಪುತ್ರನ್, ಮೀನುಗಾರ ಮುಂದಾಳು ಉದ್ಯಮಿ ಆನಂದ ಸಿ. ಕುಂದರ್, ದ.ಕ. ಮೊಗವೀರ ಮಹಾಜನ ಸಭಾ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಹೆಜಮಾಡಿ ಬಂದರು ಹೋರಾಟ ಸಮಿತಿ ಅಧ್ಯಕ್ಷ ಸದಾಶಿವ ಕೋಟ್ಯಾನ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿ ಜಿ. ಜಗದೀಶ, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿ.ಪಂ. ಸಿಇಓ ಡಾ. ನವೀನ ಭಟ್ ಮೊದಲಾದವರಿದ್ದರು.

ಈ ಸಂದರ್ಭದಲ್ಲಿ ಮತ್ಸ್ಯಾಶ್ರಯ, ಮೀನುಗಾರ ಸಂಕಷ್ಟ ಪರಿಹಾರ ನಿಧಿ ಹಾಗೂ ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮುಖ್ಯಮಂತ್ರಿ ಚೆಕ್ ವಿತರಿಸಿದರು.

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ| ಜಿ. ಕಲ್ಪನಾ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸಂಘ ವತಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಯಿತುಉಚ್ಚಿಲ ದೇವಳ ಭೇಟಿ
ಅದಕ್ಕೂ ಮುನ್ನ ಸಮಸ್ತ ಮೊಗವೀರ ಸಮುದಾಯದವರ ಆರಾಧ್ಯದೇವತೆ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಳದ ಅರ್ಚಕರು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಲಾಲಾಜಿ ಆರ್. ಮೆಂಡನ್, ಡಾ| ಜಿ. ಶಂಕರ್, ಯಶಪಾಲ್ ಸುವರ್ಣ, ಸಂಸದೆ ಶೋಭಾ ಕರಂದ್ಲಾಜೆ ಮೊದಲಾದವರಿದ್ದರು.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!