Saturday, August 13, 2022
Home ಸಮಾಚಾರ ಅಪರಾಧ ಹೇನಬೇರು ಪ್ರಕರಣ ಬೇಧಿಸಿದ ಪೊಲೀಸರು

ಹೇನಬೇರು ಪ್ರಕರಣ ಬೇಧಿಸಿದ ಪೊಲೀಸರು

ಸುದ್ದಿಕಿರಣ ವರದಿ
ಗುರುವಾರ, ಜುಲೈ 14

ಹೇನಬೇರು ಪ್ರಕರಣ ಬೇಧಿಸಿದ ಪೊಲೀಸರು
ಬೈಂದೂರು: ಒತ್ತಿನೆಣೆ ಸಮೀಪದ ಹೇನಬೇರು ರಸ್ತೆಯಲ್ಲಿ ಸುಟ್ಟು ಕರಕಲಾಗಿದ್ದ ಕಾರು ಹಾಗೂ ಅದರೊಳಗಿದ್ದ ವ್ಯಕ್ತಿ ಪತ್ತೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.

ಘಟನೆ ವಿಚಿತ್ರ ತಿರುವು ಪಡೆದುಕೊಂಡಿದ್ದು, ಆತ್ಮಹತ್ಯೆ ನಾಟಕ ಮಾಡಲು ಮುಂದಾದ ವ್ಯಕ್ತಿಯೋರ್ವನ ಸಂಚಿಗೆ ಅಮಾಯಕ ಬಲಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆಯಾದ ವ್ಯಕ್ತಿ ಕಾರ್ಕಳದ ಆನಂದ ದೇವಾಡಿಗ (62) ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.

ಪ್ರಜ್ಞೆ ತಪ್ಪಿಸಿ ಕೃತ್ಯ
ಕಾರ್ಕಳ ಮಾಳ ನಿವಾಸಿ ಸದಾನಂದ ಶೇರಿಗಾರ್ (52), ಹಿರ್ಗಾನ ಶಿವನಗರದ ಶಿಲ್ಪಾ ಸಾಲ್ಯಾನ್ (30) ಕೊಲೆ ಮಾಡಿ ಸುಟ್ಟವರು. ಇನ್ನೀರ್ವರು ಆರೋಪಿಗಳಾದ ಸೂಡ ಪಚ್ಚಲಾಡಿ ನಿವಾಸಿಗಳಾದ ಸತೀಶ್ ದೇವಾಡಿಗ (49) ಮತ್ತು ನಿತಿನ್ ದೇವಾಡಿಗ (40) ಪರಾರಿಯಾಗಲು ಸಹಕರಿಸಿದ್ದು, ಪ್ರಸ್ತುತ ಪೊಲೀಸರ ಅತಿಥಿಯಾಗಿದ್ದಾರೆ.

ಹಳೆಯ ಕೇಸೊಂದರಲ್ಲಿ ತನಗೆ ಶಿಕ್ಷೆಯಾಗುವ ಭಯದಲ್ಲಿದ್ದ ಸದಾನಂದ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಿ ದಾಖಲೆಗಳನ್ನು ನೀಡಿ ಆ ಕೇಸಿನಿಂದ ಬಚಾವ್ ಆಗುವ ಮಾಸ್ಟರ್ ಫ್ಲಾನ್ ಮಾಡಿದ್ದ.

ಅದಕ್ಕಾಗಿ ಆನಂದ ದೇವಾಡಿಗನಿಗೆ ಮದ್ಯದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿಸಿ ಕಾರಿನಲ್ಲಿ ಕರೆತಂದು 5 ಲೀಟರಿಗೂ ಅಧಿಕ ಪೆಟ್ರೋಲ್ ಕಾರಿಗೆ ಸುರಿದು, ಸುಟ್ಟುಹಾಕಿದ್ದಾರೆ.

ಆರೋಪಿ ಸದಾನಂದ ಮೊದಲು ಖಾಸಗಿ ಸರ್ವೇಯರ್ ಆಗಿದ್ದ. ಇದೀಗ ಕಲ್ಲುಕ್ವಾರಿ ನಡೆಸುತ್ತಿದ್ದಾನೆ. ಆರೋಪಿ ವಿವಾಹಿತನಾಗಿದ್ದು ಇಬ್ಬರು ಪುತ್ರಿಯರಿದ್ದಾರೆ. ಇನ್ನೊಬ್ಬಾಕೆ ಆರೋಪಿ ಶಿಲ್ಪಾ ವಿವಾಹಿತೆ. ಕೃತ್ಯದ ಬಳಿಕ ಪರಾರಿಯಾಗಲು ಸಹಕರಿಸಿದ ಸತೀಶ್ ಟೈಲರ್ ಮತ್ತು ನಿತೀಶ್ ಫೋಟೋಗ್ರಾಫರ್.

ಎರಡು ತಂಡ ರಚನೆ
ಎರಡು ತಂಡ ರಚಿಸಿ, ಆರೋಪಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದು ಕಾರ್ಕಳಕ್ಕೂ ಪೊಲೀಸರು ತೆರಳಿದ್ದರು. ಗುರುವಾರ ಬೆಳಿಗ್ಗೆ ಮೂಡುಬಿದಿರೆ ಹುಲ್ಕೇರಿ ಕ್ರಾಸ್ ಬಳಿ ಕೊಲೆ ಮಾಡಿ, ಸುಟ್ಟ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಬಳಿಕ ಸಹಕರಿಸಿದ ಇನ್ನಿಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಉಡುಪಿ ಎಸ್.ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್.ಪಿ ಎಸ್.ಟಿ ಸಿದ್ದಲಿಂಗಪ್ಪ, ಕುಂದಾಪುರ ಡಿವೈಎಸ್.ಪಿ ಶ್ರೀಕಾಂತ್ ಕೆ. ನಿರ್ದೇಶನದಲ್ಲಿ ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಬೈಂದೂರು ಪಿಎಸ್ಐ ಪವನ್ ನಾಯಕ್, ಗಂಗೊಳ್ಳಿ ಪಿಎಸ್.ಐ ವಿನಯ್ ಎಂ. ಕೊರ್ಲಹಳ್ಳಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

ಸಿಬ್ಬಂದಿಗಳಾದ ಮೋಹನ ಪೂಜಾರಿ, ನಾಗೇಂದ್ರ, ಕೃಷ್ಣ ದೇವಾಡಿಗ, ಶಾಂತಾರಾಮ ಶೆಟ್ಟಿ, ಅಣ್ಣಪ್ಪ ಪೂಜಾರಿ, ಚಂದ್ರಶೇಖರ, ಸುಜಿತ್, ಶ್ರೀಧರ, ಪ್ರಿನ್ಸ್, ಚಾಲಕ ಚಂದ್ರಶೇಖರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!