ಸುದ್ದಿಕಿರಣ ವರದಿ
ಗುರುವಾರ, ಜೂನ್ 16
ಡಾ. ಭಂಡಾರಿ ದಂಪತಿಗೆ ಗೌರವ ಪುರಸ್ಕಾರ
ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಉಡುಪಿ ತಾಲೂಕು ಘಟಕ ಆಶ್ರಯದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಮತ್ತು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಸಹಯೋಗದೊಂದಿಗೆ ಜೂ.30ರಂದು ಖ್ಯಾತ ಮನೋವೈದ್ಯ ಡಾ. ಪಿ. ವಿ. ಭಂಡಾರಿ ಹಾಗೂ ನೇತ್ರ ತಜ್ಞೆ ಡಾ. ಸುಲತಾ ಭಂಡಾರಿ ಅವರಿಗೆ ಗೌರವ ಪುರಸ್ಕಾರ ನೀಡಲಾಗುವುದು.
ಕನ್ನಡ ನಾಡು ನುಡಿ ಸಂಸ್ಕೃತಿ ಸಾಹಿತ್ಯ ಹಾಗೂ ವೈದ್ಯಕೀಯ ಸೇವೆಗಾಗಿ ಪುರಸ್ಕಾರ ನೀಡಲಾಗುತ್ತಿದ್ದು, ಅಂದು ಅಪರಾಹ್ನ 2.30 ಗಂಟೆಗೆ ಮಲಬಾರ್ ಗೋಲ್ಡ್ ಉಡುಪಿ ಶಾಖೆಯಲ್ಲಿ ಕಾರ್ಯಕ್ರಮ ಏರ್ಪಾಡಾಗಿದೆ.
ಡಾ. ಪಿ. ವಿ. ಭಂಡಾರಿ
ಸುವಿಖ್ಯಾತ ಮನೋವೈದ್ಯರಾದ ಡಾ. ಪಿ. ವಿ. ಭಂಡಾರಿ ಅವರು ದೊಡ್ಡಣಗುಡ್ಡೆ ಡಾ. ಎ. ವಿ. ಬಾಳಿಗಾ ಮೆಮೋರಿಯಲ್ ಆಸ್ಪತ್ರೆಯ ಆಡಳಿತ ನಿರ್ದೇಶಕ.
ನೂರಾರು ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಮನೋವಿಕಾಸಕ್ಕೆ ಬೇಕಾದ ಮಾಹಿತಿಯನ್ನು ಹಲವು ವರ್ಷಗಳಿಂದ ನಿರಂತರವಾಗಿ ನೀಡುತ್ತಾ ಬಂದಿದ್ದಾರೆ.
ಬಿಡುವಿಲ್ಲದ ಕಾರ್ಯಗಳ ನಡುವೆಯೂ ಮನೋವಿಜ್ಞಾನಕ್ಕೆ ಸಂಬಂಧಿಸಿದ ಹಲವು ಕೃತಿಗಳನ್ನು ಬರೆದಿದ್ದಾರೆ.
ಮಾನಸಿಕ ಸಮಸ್ಯೆ ಇರುವ, ರೋಗಿಗಳು, ಮದ್ಯಪಾನ, ಡ್ರಗ್ಸ್ ಮುಂತಾದ ಚಟಗಳಿಗೆ ಬಲಿಯಾಗಿರುವವರಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಹಲವು ಕುಟುಂಬಗಳನ್ನು ರಕ್ಷಿಸಿದ್ದಾರೆ.
ಸಾಮಾಜಿಕ ಸುಧಾರಣೆಗಾಗಿ ಹೋರಾಡುತ್ತಿರುವ ಕ್ರಾಂತಿಕಾರಿ ಮನೋಭಾವದ ಅಪರೂಪದ ವೈದ್ಯರಾದ ಡಾ. ಭಂಡಾರಿ, ಬಡ ರೋಗಿಗಳಗೆ ತಮ್ಮ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ.
ಅವರ ಸಾಧನೆಗಾಗಿ ರಾಜ್ಯ ಮನೋವಿಜ್ಞಾನ ಸಂಸ್ಥೆ ನೀಡುವ ಎಸ್.ಎಸ್ ಜಯರಾಮ ಪ್ರಶಸ್ತಿ , ಕ .ಸಾ.ಪ ವತಿಯಿಂದ ಸಾಹಿತ್ಯ ಸಮ್ಮೇಳನ ಗೌರವ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸ್ಪಂದನ ಪ್ರಶಸ್ತಿ, ಮದ್ಯ ಸಂಯಮ ಮಂಡಳಿ ಪ್ರಶಸ್ತಿ ಸಹಿತ ವಿವಿಧ ಪುರಸ್ಕಾರಗಳು ಲಭಿಸಿವೆ.
ಡಾ. ಸುಲತಾ ಭಂಡಾರಿ
ಡಾ. ಭಂಡಾರಿಯವರ ಪತ್ನಿ ಡಾ. ಸುಲತಾ ಭಂಡಾರಿ ಖ್ಯಾತ ನೇತ್ರತಜ್ಞೆ.
ಮಣಿಪಾಲ ಕೆಎಂಸಿ ಆಸ್ಪತ್ರೆಯ ನೇತ್ರ ಚಿಕಿತ್ಸಾ ವಿಭಾಗ ಮುಖ್ಯಸ್ಥೆಯೂ ಆಗಿರುವ ಡಾ. ಸುಲತಾ ಭಂಡಾರಿಯವರ ಸಾಮಾಜಿಕ ಕಾರ್ಯ ಗಮನೀಯ.