Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಹೂಡೆ ಕಡಲ ತೀರ: ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶ

ಹೂಡೆ ಕಡಲ ತೀರ: ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶ

ಉಡುಪಿ: ಜಿಲ್ಲೆಯ ಪ್ರವಾಸೋದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ವಿಶೇಷ ಸ್ಥಾನಮಾನವಿದೆ. ಇಲ್ಲಿಯ ಧಾರ್ಮಿಕ ಸ್ಥಳಗಳು, ನಯನ ಮನೋಹರ ಘಟ್ಟ ಪ್ರದೇಶಗಳು, ನೀಲವರ್ಣದ ಸಾಗರ, ಪುರಾತನ ಸ್ಮಾರಕಗಳು ಸೇರಿದಂತೆ ಹಲವಾರು ತಾಣಗಳು ಪ್ರವಾಸಿಗರನ್ನು ಮತ್ತೆ ಮತ್ತೆ ಕೈಬೀಸಿ ಕರೆಯುತ್ತವೆ. ಉಡುಪಿ ಜಿಲ್ಲೆಯಲ್ಲಿ ಹಲವಾರು ಕಡಲ ತೀರಗಳಿವೆ. ಪ್ರತಿಯೊಂದು ಕಡಲ ತೀರಗಳಿಗೂ ಅದರದ್ದೇ ಆದ ವಿಶೇಷತೆಗಳಿವೆ. ಪಡುಬಿದ್ರಿ, ಮಲ್ಪೆ, ಹೂಡೆ, ಕೋಡಿ, ಪಡುಕರೆ, ಕಾಪು ಹೀಗೆ ಹಲವಾರು ಕಡಲ ತೀರಗಳು ವಿವಿಧ ವೈಶಿಷ್ಟ್ಯಗಳಿಂದ ಕೂಡಿವೆ.

ಕೆಮ್ಮಣ್ಣಿನಲ್ಲಿರುವ ಹೂಡೆ ಕಡಲ ಕಿನಾರೆಯಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಹೇಳುವಂಥ ಯಾವುದೇ ರೀತಿಯ ಅಭಿವೃದ್ಧಿ ಆಗದಿರುವುದು ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯನ್ನು ಕುಂಠಿತಗೊಳಿಸಿದೆ. ಇಲ್ಲಿ ಹಲವಾರು ಪ್ರಬೇಧಗಳ ಕಡಲ ಹಕ್ಕಿಗಳು ವಲಸೆ ಬರುತ್ತಿರುವುದನ್ನು ಪ್ರತಿನಿತ್ಯ ವಾಯುವಿಹಾರಕ್ಕೆ ಬರುವವರು ಗಮನಿಸಿದ್ದಾರೆ. ಇಲ್ಲಿಯ ಮರಳ ರಾಶಿ ಮತ್ತು ಸೂರ್ಯಾಸ್ತದ ವೈಭವವನ್ನು ಕಣ್ತುಂಬಿಕೊಳ್ಳಲು ನೂರಾರು ಮಂದಿ ಸಂಜೆ ಸೂರ್ಯಾಸ್ತ ಸಮಯದಲ್ಲಿ ಬಂದು ಒಂದಿಷ್ಟು ಚಿತ್ರಗಳನ್ನು ಕ್ಲಿಕ್ಕಿಸಿ ಧನ್ಯತಾ ಭಾವದಿಂದ ತೆರಳುತ್ತಾರೆ.

ಹೂಡೆ ಕಡಲ ತೀರದಲ್ಲಿ ಕಳೆದ ಒಂದು ವರ್ಷದಿಂದ ಸ್ವಚ್ಛತಾ ಅಭಿಯಾನ ನಡೆಸುತ್ತಿರುವ ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ನಿರ್ಮಲ್ ತೋನ್ಸೆ ಇಲ್ಲಿಗೆ ಆಗಮಿಸುವ ಪ್ರವಾಸಿಗರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ರೀತಿಯಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿವೆ. ಪ್ಲಾಸ್ಟಿಕ್ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡಲು ಉಭಯ ಸಂಸ್ಥೆಗಳ ಸದಸ್ಯರು ಕರಪತ್ರಗಳ ಮೂಲಕ ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ಶಾಶ್ವತ ಕ್ರಮ ಅಗತ್ಯ
ಹೂಡೆ ಕಡಲ ತೀರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ದೀರ್ಘಕಾಲಿಕ ಯೋಜನೆ ಜಾರಿಗೆ ಬಂದಲ್ಲಿ ಇಲ್ಲಿಯ ಪರಿಸರ ಅತ್ಯಾಕರ್ಷಕವಾಗುವಲ್ಲಿ ಎರಡು ಮಾತಿಲ್ಲ. ಹೂಡೆ ಕಡಲ ತೀರಕ್ಕೆ ಬರುವ ಪ್ರತಿಯೊಬ್ಬ ಪ್ರವಾಸಿಗನಲ್ಲಿ ಈ ಜಾಗ ನನ್ನದು, ಇಲ್ಲಿಯ ಶುಚಿತ್ವದ ರಕ್ಷಣೆ ನನ್ನ ಜವಾಬ್ದಾರಿ ಎಂಬ ಭಾವನೆ ಬಂದರೆ ಬದಲಾವಣೆ ಸಾಧ್ಯ ಎಂದು ನಿರ್ಮಲ್ ತೋನ್ಸೆ ಅಧ್ಯಕ್ಷ ವೆಂಕಟೇಶ್ ಕುಂದರ್ ಹೇಳುತ್ತಾರೆ.

ನಿರ್ಮಲ್ ತೋನ್ಸೆ ಸಂಸ್ಥೆ, ತೋನ್ಸೆ ಗ್ರಾಮ ಪಂಚಾಯತ್ ಮತ್ತು ಸ್ವಚ್ಛ ಭಾರತ್ ಫ್ರೆಂಡ್ಸ್ ಜೊತೆ ಸೇರಿಕೊಂಡು ನಿರಂತರವಾಗಿ ಪರಿಸರದಲ್ಲಿ ಸ್ವಚ್ಛತೆ ಕಾಪಾಡಲು ಕಳೆದ ಒಂದು ವರ್ಷದಿಂದ ವಿವಿಧ ಚಟುವಟಿಕೆ ಹಮ್ಮಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. ಪ್ರತಿಯೊಬ್ಬನೂ ಕಡಲ ತೀರದ ಸ್ವಚ್ಛತೆ ಕಾಪಾಡಲು ಶಾಶ್ವತ ಕ್ರಮ ಕೈಗೊಳ್ಳಬೇಕಾಗಿದೆ. ಪ್ಲಾಸ್ಟಿಕ್ ಮುಕ್ತ ಹಸಿರು ಯುಕ್ತ ಹೂಡೆ ನಮ್ಮ ಕನಸಾಗಿದೆ.

ಹೂಡೆ ಕಡಲ ತೀರವನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸುವ ನೀಲಿ ನಕಾಶೆಯನ್ನು ಸರಕಾರದ ವತಿಯಿಂದ ಸಿದ್ಧಪಡಿಸುವ ಕಾರ್ಯ ಆಗಬೇಕಾಗಿದೆ. ಯೋಜನೆ ರೂಪಿಸುವ ಪ್ರಕ್ರಿಯೆಯಲ್ಲಿ ಸ್ಥಳೀಯ ಸಂಘಸಂಸ್ಥೆಗಳು, ಸಾರ್ವಜನಿಕರನ್ನು ಸೇರಿಸಿದಲ್ಲಿ ಯೋಜನೆ ಪರಿಣಾಮಕಾರಿಯಾಗಲಿದೆ. ಸ್ಥಳೀಯರೂ ಕಡಲ ತೀರದಲ್ಲಿ ತ್ಯಾಜ್ಯ ಎಸೆಯುವ ವ್ಯಕ್ತಿಗಳಿಗೆ ಅರಿವು ಮೂಡಿಸುವ ಮೂಲಕ ಅವರ ಮನಃಪರಿವರ್ತನೆಗೊಳಿಸುವ ಕಾರ್ಯ ಮಾಡಿದಲ್ಲಿ ಹೂಡೆ ಕಡಲ ತೀರವು ಸ್ವಚ್ಛವಾಗಿರಲಿದೆ ಎಂಬುದು ವೆಂಕಟೇಶ್ ಕುಂದರ್ ಮಾತು.

ಅರಿವು ಮೂಡಿಸುವ ಕಾರ್ಯ ಆಗಬೇಕು
ಪ್ರವಾಸೋದ್ಯಮ ಅಭಿವೃದ್ಧಿಯಾಗಲು ಪ್ರವಾಸಿಗರು ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರತಿಯೊಬ್ಬ ಪ್ರವಾಸಿಗನಲ್ಲಿ ಪರಿಸರ ರಕ್ಷಣೆ ಬಗೆಗಿನ ತುಡಿತವುಂಟಾಗಿದಲ್ಲಿ ಅದರಿಂದ ದೊಡ್ಡ ಕ್ರಾಂತಿಯನ್ನೇ ನಿರೀಕ್ಷಿಸಬಹುದು ಎಂದು ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಜಿ. ನಾಯಕ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಸ್ವಚ್ಛ ಭಾರತ್ ಫ್ರೆಂಡ್ಸ್ ಈಗಾಗಲೇ ಹಲವಾರು ಕಡಲ ತೀರ, ನದಿ ತಟ, ರೈಲು ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಿರಂತರವಾಗಿ ಸ್ವಚ್ಛತಾ ಅಭಿಯಾನ ನಡೆಸಿದೆ. ಕಳೆದ ಒಂದು ವರ್ಷದಿಂದ ನಿರ್ಮಲ್ ತೋನ್ಸೆ ಸಂಸ್ಥೆಯೊಂದಿಗೆ ಹೂಡೆ ಕಡಲ ತೀರದಲ್ಲಿ ಸ್ವಚ್ಛತೆ ಕಾರ್ಯ ಎತ್ತಿಹಿಡಿಯುವ ಅಳಿಲು ಸೇವೆಯನ್ನು ತೋನ್ಸೆ ಗ್ರಾಮ ಪಂಚಾಯತ್ ಮತ್ತು ಸ್ಥಳೀಯರ ಸಹಕಾರದಿಂದ ಮಾಡಲಾಗುತ್ತಿದೆ. ಮದ್ಯದ ಬಾಟಲ್ ಗಳೇ ಕಡಲ ತೀರದಲ್ಲಿ ಸಾವಿರಾರು ಸಂಖ್ಯೆಯಲ್ಲಿರುವುದು ಸಾರ್ವಜನಿಕರ ಸುರಕ್ಷೆ ಮತ್ತು ಸ್ವಚ್ಛತೆಯ ಹಿತದೃಷ್ಟಿಯಿಂದ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಕಳೆದ ನ. 29ರಂದು ಸ್ವರ್ಣಾರಾಧನಾ ಅಭಿಯಾನ ಅಂಗವಾಗಿ ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ನಿರ್ಮಲ್ ತೋನ್ಸೆ ನೇತೃತ್ವದಲ್ಲಿ ಇತರ ಸಂಘಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿ ನಡೆಸಲಾಯಿತು. ಅಭಿಯಾನದಲ್ಲಿ ತೋನ್ಸೆ ಗ್ರಾಮ ಪಂಚಾಯತ್, ಸೌತ್ ಕೆನರಾ ಫೊಟೊಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ, ಲಯನ್ಸ್ ಕ್ಲಬ್ ಕಲ್ಯಾಣಪುರ, ಬ್ಲಾಕ್ ಹಾಕ್ ರೈಡರ್ಸ್ ಉಡುಪಿ, ಜಯಂಟ್ಸ್ ಉಡುಪಿ ಬ್ರಹ್ಮಾವರ, ಹಳೆವಿದ್ಯಾರ್ಥಿ ಸಂಘ ಸ.ಪ.ಪೂ ಕಾಲೇಜು ಕೆಮ್ಮಣ್ಣು ಹಾಗೂ ಸ್ಥಳೀಯರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದರು.

ಸಾವಿರಾರು ಬಾಟಲ್ ಗಳು, ನೂರಾರು ಕೆಜಿ ಪ್ಲಾಸ್ಟಿಕ್ ತ್ಯಾಜ್ಯಗಳು ಅಂದು ಸುಮಾರು ಒಂದು ಕಿ. ಮೀ. ಕಡಲ ತೀರದಿಂದ ಸಂಗ್ರಹಿಸಲಾಯಿತು. ಅಲ್ಲಲ್ಲಿ ತುಂಡಾಗಿ ಬಿದ್ದಿರುವ ಬಾಟಲ್ ಗಳಿಂದ ಬರಿಗಾಲಲ್ಲಿ ವಾಯು ವಿಹಾರ ಮಾಡುವವರಿಗೆ ತೊಂದರೆ ಉಂಟಾಗುತ್ತಿರುವುದು ಮಾತ್ರವಲ್ಲದೆ, ನಯನ ಮನೋಹರ ಕಡಲ ತೀರದ ಸ್ವಚ್ಛತೆಗೂ ಕಪ್ಪುಚುಕ್ಕೆಯಾಗಿದೆ. ಕಡಲ ತೀರದಲ್ಲಿ ತ್ಯಾಜ್ಯ ಎಸೆಯಲು ಅನುಕೂಲವಾಗುವಂಥ ಡಸ್ಟ್ ಬಿನ್ ಗಳು ಅಲ್ಲಲ್ಲಿ ಇಟ್ಟಲ್ಲಿ ಪ್ರವಾಸಿಗರಿಗೆ ಆಹಾರ ಪೊಟ್ಟಣಗಳು, ನೀರಿನ ಬಾಟಲ್ ಗಳನ್ನು ಹಾಕಲು ಅನುಕೂಲವಾಗುತ್ತದೆ. ಸರಕಾರದ ವತಿಯಿಂದ ಹೂಡೆ ಕಡಲ ತೀರದ ಮೂಲಭೂತ ಸೌಲಭ್ಯ ಅಭಿವೃದ್ಧಿಪಡಿಸಿದರೆ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಗಣನೀಯವಾಗಿ ಹೆಚ್ಚಳವಾಗಲಿದೆ ಎಂಬುದು ಗಣೇಶ್ ಪ್ರಸಾದ್ ಜಿ. ನಾಯಕ್ ಅಬಿಮತ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!