ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಹಾಗೂ ಮಣಿಪಾಲ ಮೀಡಿಯಾ ನೆಟ್ ವರ್ಕ್ ಸಂಯುಕ್ತಾಶ್ರಯದಲ್ಲಿ ಪ್ರತಿವರ್ಷ ನೀಡುವ ಹೊಸ ವರ್ಷ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳ ನಾಲ್ವರು ಸಾಧಕರಿಗೆ ನೀಡಲಾಯಿತು.
ಮಾಜಿ ಸಚಿವ ಮೂಡುಬಿದಿರೆ ಕೆ. ಅಭಯಚಂದ್ರ ಜೈನ್, ಹಿರಿಯ ಸಾಹಿತಿ ಉಷಾ ರೈ, ಮಣಿಪಾಲ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಕೆ. ಎಸ್. ಎಸ್. ಭಟ್ ಮತ್ತು ಹಿರಿಯ ಯಕ್ಷಗಾನ ಕಲಾವಿದ ಬಳ್ಕೂರು ಕೃಷ್ಣ ಯಾಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸನ್ಮಾನಕ್ಕುತ್ತರವಾಗಿ ಮಾತನಾಡಿದ ಕೃಷ್ಣ ಯಾಜಿ, ರಾಜ್ಯದ ಸಾಂಸ್ಕೃತಿಕ ಹೆಗ್ಗುರಾತ ಯಕ್ಷಗಾನ ಮನರಂಜನೆಗೆ ಮಾತ್ರ ಸೀಮಿತವಾಗಿರದೇ ಮಾನಸಿಕ ಪ್ರಬುದ್ಧತೆಗೂ ಪೂರಕ ಎಂದರು.
ಸಾಹಿತಿ ಡಾ. ಉಷಾ ರೈ, ತನ್ನ ತಂದೆ ಹೊನ್ನಪ್ಪ ಶೆಟ್ಟಿ ಅವರಿಗೂ 1973ರಲ್ಲಿ ಪ್ರಶಸ್ತಿ ಲಭಿಸಿತ್ತು. ಇದೀಗ ತನಗೆ ಪ್ರಶಸ್ತಿ ಲಭಿಸಿರುವುದು ಖುಷಿ ತಂದಿದೆ ಎಂದರು.
ಹಿರಿಯ ವೈದ್ಯ ಡಾ. ಕೆ. ಎಸ್. ಎಸ್. ಭಟ್, ಕೊರೊನಾ ಸಾಕಷ್ಟು ಪಾಠ ಕಲಿಸಿದ್ದು, ನಮ್ಮ ಜೀವನ ಶೈಲಿ ಬದಲಿಸಬೇಕಿದೆ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಸನ್ಮಾನ ಲಭಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಮಣಿಪಾಲ ಮಾಹೆ ಉಪಕುಲಪತಿ ಡಾ. ವೆಂಕಟೇಶ ಅಭಿನಂದನ ಭಾಷಣ ಮಾಡಿದರು. ಮಾಹೆ ಟ್ರಸ್ಟ್ ವಿಶ್ವಸ್ಥೆ ವಾಸಂತಿ ಪೈ, ಅಕಾಡೆಮಿ ಆಫ್ ಎಜ್ಯುಕೇಶನ್ ಕುಲಸಚಿವ ಡಾ. ರಂಜನ್ ಪೈ, ಮಣಿಪಾಲ ಮೀಡಿಯಾ ನೆಟ್ ವರ್ಕ್ ನ ಸತೀಶ ಯು. ಪೈ ಇದ್ದರು.
ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಅಧ್ಯಕ್ಷ ಹಾಗೂ ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಸ್ವಾಗತಿಸಿದರು.