ಉಡುಪಿ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ನೇತೃತ್ವದಲ್ಲಿ ಗುರುವಾರ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜೋಡುಕಟ್ಟೆಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಅಜ್ಜರಕಾಡು ಹುತಾತ್ಮ ವೇದಿಕೆ ಬಳಿ ಸಮಾಪನಗೊಂಡಿತು.
ತಳ್ಳುಗಾಡಿಯಲ್ಲಿ ಮೋಟಾರ್ ಬೈಕ್, ಗ್ಯಾಸ್ ಸಿಲಿಂಡರ್ ಇರಿಸಿ ಪ್ರತಿಭಟನಾಕಾರರು ವಿಭಿನ್ನವಾಗಿ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. `ಪೆಟ್ರೋಲ್ ಹಾಕಿ ವಾಹನ ಚಲಾಯಿಸಲು ಸಾಧ್ಯವಿಲ್ಲ, ತಳ್ಳುಗಾಡಿಯ ಮೇಲೆ ದ್ವಿಚಕ್ರ ವಾಹನ ಇಟ್ಟು ತಳ್ಳುತ್ತಾ ಹೋಗುವ ಪರಿಸ್ಥಿತಿ ಇದೆ’ ಎಂಬುದನ್ನು ಮಾರ್ಮಿಕವಾಗಿ ತಿಳಿಸಿದರು.
ಅತಿಥಿ ಉಪನ್ಯಾಸಕರ ಸಾಥ್
ಪ್ರತಿಭಟನೆಗೆ ಅತಿಥಿ ಉಪನ್ಯಾಸಕರೂ ಕೈಜೋಡಿಸಿದ್ದರು. ಸಂಬಳ ಪಡೆಯದೇ, ಕೆಲಸವಿಲ್ಲದೆ ಜೀವನ ನಿರ್ವಹಣೆ ಕಷ್ಟಸಾಧ್ಯ. ನಮ್ಮ ಹೆಣದ ಯಾತ್ರೆಯನ್ನು ನಾವೇ ಮಾಡುವ ಪರಿಸ್ಥಿತಿ ಇದೆ ಎಂಬುದನ್ನು ಅಣುಕು ಶವಯಾತ್ರೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ವಳಕಾಡು, ದೇಶದಲ್ಲಿ ಕೊರೊನಾದಿಂದಾಗಿ ಜನಸಾಮಾನ್ಯರಿಗೆ ಬಹಳ ಕಷ್ಟವಾಗಿದೆ. ದುರ್ಗಮ ಸಂದರ್ಭದಲ್ಲಿ ಸರ್ಕಾರ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಮಾಡುವುದು, ಅಡುಗೆ ಅನಿಲ ಬೆಲೆ ಏರಿಸಿರುವುದು ಖಂಡನೀಯ. ಕೂಡಲೇ ಬೆಲೆ ಇಳಿಸಬೇಕು. ಜನಸಾಮಾನ್ಯರಿಗೆ ಬದುಕುವ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ತಾರಾನಾಥ ಮೇಸ್ತ ಶಿರೂರು ಮೊದಲಾದವರಿದ್ದರು.