Thursday, July 7, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಡಿಜಿಟಲ್ ಕರೆನ್ಸಿ ಜಾರಿ: ಸಚಿವೆ ನಿರ್ಮಲಾ

ಡಿಜಿಟಲ್ ಕರೆನ್ಸಿ ಜಾರಿ: ಸಚಿವೆ ನಿರ್ಮಲಾ

ಸುದ್ದಿಕಿರಣ ವರದಿ
ಶನಿವಾರ, ಮೇ 14

ಡಿಜಿಟಲ್ ಕರೆನ್ಸಿ ಜಾರಿ: ಸಚಿವೆ ನಿರ್ಮಲಾ
ಉಡುಪಿ: ದೇಶದ ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಯನ್ನು ಆಜಾದಿ ಕಾ ಅಮೃತ್ ಮಹೋತ್ಸವ ಎಂಬುದಾಗಿ ಆಚರಿಸಲಾಗುತ್ತಿದೆ. ಈ ಮಹೋತ್ಸವ ಅಂಗವಾಗಿ ಈ ವರ್ಷ ದೇಶದಲ್ಲಿ 75 ಡಿಜಿಟಲ್ ಬ್ಯಾಂಕ್ ಸೆಂಟರ್ ಗಳನ್ನು ತೆರೆಯಲಾಗುವುದು. ಡಿಜಿಟಲ್ ಕರೆನ್ಸಿಯನ್ನೂ ಜಾರಿಗೊಳಿಸಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಶನಿವಾರ ಮಣಿಪಾಲ ಟಿ.ಎ. ಪೈ ಮ್ಯಾನೇಜ್ ಮೆಂಟ್ ಇನ್ ಸ್ಟಿಟ್ಯೂಟ್ (ಟ್ಯಾಪ್ಮಿ)ನ 36ನೇ ವರ್ಷದ ಘಟಿಕೋತ್ಸವದಲ್ಲಿ ಮಾತನಾಡಿದರು.

ಡಿಜಿಟಲ್ ಕ್ಷೇತ್ರದ ವಿಶ್ವ ಗುರು
ಮುಂದಿನ 25 ವರ್ಷ ನಮ್ಮ ದೇಶದ ಅಮೃತ ಕಾಲವಾಗಿದ್ದು, ಆ ಅವಧಿಯಲ್ಲಿ ಭಾರತ ಡಿಜಿಟಲ್ ಕ್ಷೇತ್ರದ ಮೂಲಕ ವಿಶ್ವ ಗುರುವಾಗಲಿದೆ ಎಂದು ಭವಿಷ್ಯ ನುಡಿದ ಸಚಿವೆ ನಿರ್ಮಲಾ, ಸ್ವಾತಂತ್ರ್ಯೋತ್ಸವದ 100ನೇ ವರ್ಷಾಚರಣೆ ಸಂದರ್ಭದಲ್ಲಿ ದೇಶದಲ್ಲಿ ಡಿಜಿಟಲ್ ಲರ್ನಿಂಗ್, ಡಿಜಿಟಲ್ ಟೀಚಿಂಗ್, ಡಿಜಿಟಲ್ ಬ್ಯಾಂಕಿಂಗ್ ಮತ್ತು ಭೂ ದಾಖಲೆಗಳ ಡಿಜಿಟಲ್ ರೆಕಾರ್ಡ್ ಸಾಕಾರಗೊಳ್ಳಲಿದೆ. ಅದೆಲ್ಲದರ ನೇರ ಲಾಭ ಸಮಾಜದ ತೀರಾ ಸಾಮಾನ್ಯ ಜನರಿಗೆ ಲಭಿಸಲಿದೆ ಎಂದರು.

ಅರ್ಥ ಮಾಡಿಕೊಳ್ಳುವ ಮನೋಭಾವ ಅಗತ್ಯ
ಪ್ರಧಾನಿ ಮೋದಿ ಅವರು ದೇಶವನ್ನು ವಿಶ್ವ ಗುರುವನ್ನಾಗಿ ಮಾಡುವ ಘೋಷಣೆ ಮಾಡಿದ್ದಾರೆ. ಇದು ಕೇವಲ ಕನಸಲ್ಲ, ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲಾಗುತ್ತಿದೆ.

ಜಗತ್ತಿನ ಯಾವುದೇ ದೇಶ, ನಮ್ಮ ದೇಶಕ್ಕೆ ಬಂದು ತಮ್ಮ ವಿ.ವಿ. ಅಥವಾ ಕೇಂದ್ರ ಆರಂಭಿಸಲು ಅವಕಾಶ ನೀಡಲಾಗಿದೆ. ನಮ್ಮ ದೇಶದಲ್ಲಿ ಉದ್ದಿಮೆ ಸ್ಥಾಪಿಸಲು ಬಯಸುವವರಿಗೆ ನಾವೇ ಕೌಶಲ್ಯ ಮತ್ತು ಮಾನವ ಸಂಪತ್ತನ್ನು ನೀಡುತ್ತೇವೆ ಎಂದರು.

ಪದವಿ ಪಡೆದು ಹೊರಗೆ ಬರುವ ವಿದ್ಯಾರ್ಥಿಗಳಲ್ಲಿ ಕೇವಲ ಕೌಶಲ್ಯ ಇದ್ದರೆ ಸಾಲದು, ಸಮುದಾಯದ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳುವ ಮನೋಭಾವ ಇರಬೇಕು ಎಂದು ಕಿವಿಮಾತು ಹೇಳಿದ ಸಚಿವೆ ನಿರ್ಮಲಾ ಸೀತಾರಾಮನ್, ಮಣಿಪಾಲದ ಡಾ. ಟಿ.ಎಂ.ಪೈ ಅವರಿಗೆ ಈ ಮನೋಭಾವ ಇದ್ದುದರಿಂದಲೇ ಮಣಿಪಾಲಕ್ಕೆ ಇಂದಿಗೂ ಸಮಾಜಕ್ಕೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿದೆ ಎಂದು ಉದಾಹರಿಸಿದರು.

ಬೆಂಗಳೂರಿನ ತೆನೋವಿಯಾ ಸಂಸ್ಥೆ ಸಹಸ್ಥಾಪಕಿ ಸೋನು ಸೋಮಪಾಲ್, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಟ್ಯಾಪ್ಮಿ ನಿರ್ದೇಶಕ ಪ್ರೊ. ಮಧು ವೀರರಾಘವನ್ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!