Monday, July 4, 2022
Home ಸಮಾಚಾರ `ಜನರ ಸಂಕಷ್ಟಕ್ಕೆ ಸ್ಪಂದಿಸದ ಸರಕಾರ'

`ಜನರ ಸಂಕಷ್ಟಕ್ಕೆ ಸ್ಪಂದಿಸದ ಸರಕಾರ’

ಉಡುಪಿ: ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ನಿರಂತರವಾಗಿ ಏರುಗತಿಯತ್ತ ಸಾಗುತ್ತಲೇ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಡಿಮೆ ಇದ್ದರೂ ದೇಶದಲ್ಲಿ ಅನಿಯಂತ್ರಿತವಾಗಿ ತೈಲ ಬೆಲೆ ಏರಿಕೆ ಕಂಡು ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಜನತೆಯ ಸಂಕಷ್ಟಕ್ಕೆ ಸರಕಾರ ಧ್ವನಿಯಾಗುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಪಕ್ಷದ ವಕ್ತಾರ ಭಾಸ್ಕರ ರಾವ್ ಕಿದಿಯೂರು ಹೇಳಿಕೆ ನೀಡಿ, ಕೇಂದ್ರದಲ್ಲಿ ಯುಪಿಎ ಸರಕಾರವಿದ್ದಾಗ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಜನರಿಗೆ ಹೊರೆಯಾಗದ ರೀತಿಯಲ್ಲಿ ಸ್ವಲ್ಪ ಏರಿಕೆ ಕಂಡರೂ ಅದನ್ನೇ ನೆಪವಾಗಿಸಿಕೊಂಡು ಬಿಜೆಪಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿತ್ತು. ಇದೀಗ ದಿನಂಪ್ರತಿ ಬೆಲೆ ಏರಿಕೆ ಕಂಡರೂ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಅಧಿಕಾರವಿಲ್ಲದಾಗ ಜನಪರ ಕಾಳಜಿಯ ನಾಟಕವಾಡುವ ಬಿಜೆಪಿ, ಅಧಿಕಾರದಲ್ಲಿದ್ದಾಗ ಜನವಿರೋಧಿ ನಿಲುವು ತೆಗೆದುಕೊಳ್ಳುವುದು ಖಂಡನೀಯ ಎಂದವರು ಹೇಳಿದ್ದಾರೆ.

ವಸ್ತುಗಳ ಬೆಲೆ ಏರಿಕೆಯಿಂದ ಅರ್ಥ ವ್ಯವಸ್ಥೆಗೆ ಹೊಡೆತ ಬೀಳಲಿದೆ. ಸರಕಾರ ಲಾಕ್ ಡೌನ್ ಬಳಿಕ ಮಾರುಕಟ್ಟೆ ಚೇತರಿಸಲು ಪೂರಕ ಸನ್ನಿವೇಶ ಒದಗಿಸುವ ಬದಲು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಕೊಡುಗೆ ನೀಡಿ ಹಣದುಬ್ಬರದಿಂದ ಜನತೆ ಇನ್ನಷ್ಟು ಹೈರಾಣಾಗುವಂತೆ ಮಾಡಿದೆ. ತೈಲ, ಅಡುಗೆ ಅನಿಲ ಬೆಲೆ ನಿಯಂತ್ರಣದಲ್ಲಿಟ್ಟುಕೊಳ್ಳಲು ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಭಾಸ್ಕರ ರಾವ್ ಆರೋಪಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!