ಉಡುಪಿ: ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿದಲ್ಲಿ ಸ್ವಚ್ಛ ಪರಿಸರ ನಿರ್ಮಾಣ ಸಾಧ್ಯ ಎಂದು ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷೆ ಮೇರಿ ಡಿ’ಸೋಜಾ ಹೇಳಿದರು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ 52 ಚರ್ಚುಗಳಲ್ಲಿ ಏಕಕಾಲದಲ್ಲಿ ವನಮಹೋತ್ಸವಕ್ಕೆ ಶಂಕರಪುರದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ವನಮಹೋತ್ಸವ, ಪರಿಸರ ದಿನಾಚರಣೆಯಂಥ ಕಾರ್ಯಕ್ರಮಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೇ, ಪ್ರತಿನಿತ್ಯ ಈ ಬಗ್ಗೆ ಜಾಗೃತಿ ವಹಿಸುವುದು ಅಗತ್ಯ. ಪ್ರತಿಯೊಬ್ಬರೂ ಪರಿಸರ ರಕ್ಷಣೆಗೆ ಜಾಗೃತಿ ವಹಿಸುವುದರೊಂದಿಗೆ ಪರಿಸರದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಆವಶ್ಯಕತೆ ಇದೆ ಎಂದರು.
ಪ್ರತಿ ವರ್ಷವೂ ವನಮಹೋತ್ಸವ ಆಚರಣೆ ನಡೆಯುತ್ತಿದೆ. ನೆಟ್ಟ ಗಿಡಗಳು ಎಷ್ಟರ ಮಟ್ಟಿಗೆ ಬದುಕಿವೆ ಎನ್ನುವುದೂ ಮುಖ್ಯ. ಈ ನಿಟ್ಟಿನಲ್ಲಿ ಕೆಥೊಲಿಕ್ ಸಭಾ ನಮ್ಮ ಪರಿಸರ ನಮ್ಮ ಬದುಕು ಸ್ಪರ್ಧೆಯನ್ನು ಎಲ್ಲಾ ಚರ್ಚುಗಳಿಗೆ ಸೀಮಿತವಾಗಿ ಆಯೋಜಿಸಿದೆ. ಅದರಂತೆ ನೆಟ್ಟ ಗಿಡ ಪಾಲನೆ ಮಾಡುವುದರೊಂದಿಗೆ ಅದರ ಬೆಳವಣಿ ಕುರಿತು ಕಾಲ ಕಾಲಕ್ಕೆ ವೀಡಿಯೊ ಮೂಲಕ ಕೇಂದ್ರಿಯ ಸಮಿತಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಗಿಡವನ್ನು ಅತ್ಯುತ್ತಮವಾಗಿ ಪಾಲನೆ ಮಾಡಿದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಕೇಂದ್ರಿಯ ಸಮಿತಿ ಆಧ್ಯಾತ್ಮಿಕ ನಿರ್ದೇಶಕ ವಂ| ಫರ್ಡಿನಾಂಡ್ ಗೊನ್ಸಾಲ್ವಿಸ್, ಹಸಿರು ಪರಿಸರ ಮರ ಗಿಡಗಳ ಅಗತ್ಯತೆ ಮತ್ತು ತಾಪಮಾನ ಏರಿಕೆಯಿಂದ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ತಿಳಿಸಿದರು.
ಶಂಕರಪುರ ಚರ್ಚ್ ಸಹಾಯಕ ಧರ್ಮಗುರು ವಂ| ಅನಿಲ್ ಫ್ರಾನ್ಸಿಸ್ ಪಿಂಟೊ, ಕೇಂದ್ರಿಯ ಸಮಿತಿ ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಸ್ಥಳೀಯ ಶಂಕರಪುರ ಘಟಕದ ಪದಾಧಿಕಾರಿಗಳು ಇದ್ದರು.
ಕೇಂದ್ರಿಯ ಕಾರ್ಯದರ್ಶಿ ಗ್ರೆಗರಿ ಪಿ. ಕೆ. ಡಿ’ಸೋಜಾ ಸ್ವಾಗತಿಸಿ, ಶಂಕರಪುರ ಘಟಕ ಕಾರ್ಯದರ್ಶಿ ರೇಶ್ಮಾ ಕ್ಯಾಸ್ತಲಿನೊ ವಂದಿಸಿದರು. ಅನಿತಾ ಆರ್. ಡಿ’ಸೋಜಾ ನಿರೂಪಿಸಿದರು.