Wednesday, July 6, 2022
Home ಅಧ್ಯಾತ್ಮ ಜೂನ್ 1- 10: ಕಡಿಯಾಳಿ ಬ್ರಹ್ಮಕಲಶೋತ್ಸವ

ಜೂನ್ 1- 10: ಕಡಿಯಾಳಿ ಬ್ರಹ್ಮಕಲಶೋತ್ಸವ

ಸುದ್ದಿಕಿರಣ ವರದಿ
ಬುಧವಾರ, ಮೇ 4

ಜೂನ್ 1- 10: ಕಡಿಯಾಳಿ ಬ್ರಹ್ಮಕಲಶೋತ್ಸವ
ಉಡುಪಿ: ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಜೂನ್ 1ರಿಂದ ಪ್ರಾರಂಭಗೊಂಡು ಜೂನ್ 10ರ ತನಕ ನಡೆಸಲಾಗುವುದು ಎಂದು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ಕಟ್ಟೆ ರವಿರಾಜ ಆಚಾರ್ಯ ತಿಳಿಸಿದರು.

ಜೂ. 1ರಂದು ಹೊರೆಕಾಣಿಕೆ ಸಮರ್ಪಣೆ
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು. ಜೂ. 1ರ ಅಪರಾಹ್ನ 4 ಗಂಟೆಗೆ ನಗರದ ಜೋಡುಕಟ್ಟೆಯಿಂದ ಬಿರುದಾವಳಿ, ಕೀಲುಕುದುರೆ, ನಾಡಿನ ವಿವಿಧ ಸಾಂಸ್ಕೃತಿಕ ತಂಡಗಳೊಂದಿಗೆ ಬೃಹತ್ ಹೊರಕಾಣಿಕೆ ಮೆರವಣಿಗೆ ನಡೆಸಲಾಗುವುದು.

ಜೂ. 2ರಂದು ಬೆಳಿಗ್ಗೆ ಉಷಃಕಾಲದಲ್ಲಿ ಪ್ರಾರ್ಥನೆ, ಬಳಿಕ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಭಜನಾ ಮಂಡಳಿ ಮತ್ತು ಅತಿಥಿ ಭಜನಾ ತಂಡಗಳಿಂದ ನಿರಂತರ ಅಖಂಡ ಅಹೋರಾತ್ರಿ ಭಜನೆ ನಡೆಯಲಿದೆ.

ಜೂ. 3ರಂದು ಋತ್ವಿಜರ ಆಗಮನದಿಂದ ಪ್ರಾರಂಭಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಜೂ. 8ರಂದು ಕುಂಭಾಭಿಷೇಕ
ಪಂಚ ದುರ್ಗಾ ಮಂತ್ರ ಹೋಮದೊಂದಿಗೆ ಜೂ. 8ರ ಜ್ಯೇಷ್ಠ ಶುದ್ಧ ಅಷ್ಟಮಿ ಪೂರ್ವಾಹ್ನ 7.50ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕುಂಭಾಭಿಷೇಕ ನಡೆಯಲಿದೆ. ಅಂದು ರಾತ್ರಿ ರಥೋತ್ಸವ ನಡೆಯಲಿದೆ.

ಜೂ. 9ರಂದು ಸಂಜೆ 7ರಿಂದ ಪಿಲಿಚಂಡಿ ಮತ್ತು ಪರಿವಾರ ದೈವಗಳ ಬಾಳು ಭಂಡಾರ ಶ್ರೀಕ್ಷೇತ್ರದಿಂದ ಹೊರಟು ರಾತ್ರಿ ದೈವಗಳ ಗಗ್ಗರ ಸೇವೆ (ಕೋಲ) ನಡೆಯಲಿದೆ.

ಜೂ. 10ರಂದು ಧಾರ್ಮಿಕ ಕಾರ್ಯಕ್ರಮ ಸಮಾಪನಗೊಳ್ಳಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಹೆಗ್ಡೆ ವಿವರಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಕಾಮತ್, ಹೊರಕಾಣಿಕೆ ಸಮಿತಿ ಅಧ್ಯಕ್ಷ ಭಾಸ್ಕರ್ ಶೇರಿಗಾರ್, ಜೀರ್ಣೋದ್ಧಾರ ಸಮಿತಿ ಜೊತೆ ಕಾರ್ಯದರ್ಶಿ ಕೆ. ಸತೀಶ್ ಕುಲಾಲ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಮಂಜುನಾಥ ಹೆಬ್ಬಾರ್ ಮತ್ತು ನಾಗರಾಜ್ ಶೆಟ್ಟಿ ಇದ್ದರು.

ಮೇ 6ರಂದು ಆಮಂತ್ರಣ ಪತ್ರಿಕೆ ಬಿಡುಗಡೆ
ಬ್ರಹ್ಮಕಲಶೋತ್ಸವ ಪುಣ್ಯೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮೇ 6ರಂದು ಸಂಜೆ 7 ಗಂಟೆಗೆ ನಡೆಯಲಿದೆ. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಬಿಡುಗಡೆಗೊಳಿಸಲಿದ್ದಾರೆ.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಹಾಗೂ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಅಭ್ಯಾಗತರಾಗಿ ಭಾಗವಹಿಸುವರು.

ಆಮಂತ್ರಣ ಪತ್ರಿಕೆ ಬಿಡುಗಡೆ ಬಳಿಕ ಖ್ಯಾತ ಭಾಗವತ ಪಾವಂಜೆ ಸತೀಶ ಶೆಟ್ಟಿ ಸಾರಥ್ಯದ ಪಾವಂಜೆ ನಾಗವೃಜ ಕ್ಷೇತ್ರ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಶ್ರೀದೇವಿ ಲಲಿತೋಪಾಖ್ಯಾನ ಯಕ್ಷಗಾನ ಪ್ರದರ್ಶನವಿದೆ ಎಂದು ರಾಘವೇಂದ್ರ ಕಿಣಿ ತಿಳಿಸಿದರು.

ಸಾಂಸ್ಕೃತಿಕ ಹಬ್ಬ
ಬ್ರಹ್ಮಕಲಶೋತ್ಸವ ಪ್ರಯುಕ್ತ ನಾಡಿನ ವಿವಿಧ ಕಲಾವಿದರ ಸಾಂಸ್ಕೃತಿಕ ಹಬ್ಬ ನಡೆಯಲಿದೆ. ದಿನನಿತ್ಯವೂ ಸಂಜೆ 7 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಶಿವದೂತ ಗುಳಿಗ, ಸಾಲಿಗ್ರಾಮ ಮೇಳದಿಂದ ದಕ್ಷಯಜ್ಞ ಶಶಿಪ್ರಭಾ ಪರಿಣಯ ಯಕ್ಷಗಾನ ರಾಘವೇಂದ್ರ ಜನ್ಸಾಲೆ ನೇತೃತ್ವದಲ್ಲಿ ನಡೆಯಲಿದೆ.

ಪುತ್ತೂರು ಜಗದೀಶ ಆಚಾರ್ಯರ ಸಂಗೀತ ಗಾನ ಸಂಭ್ರಮ, ವಿದ್ಯಾನಿಧಿ ಬಿರುದಾಂಕಿತ ಡಾ| ವಿದ್ಯಾ ಭೂಷಣ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ರಾಷ್ಟ್ರದ ವಿವಿಧ ತಂಡಗಳಿಂದ ವಂದೇ ಭಾರತ ಕಾರ್ಯಕ್ರಮ, ತುಳುನಾಡ ವೈಭವ, ಪುಣ್ಯ ಡ್ಯಾನ್ಸ್ ಗ್ರೂಪ್ ಕಂಪೆನಿಯವರಿಂದ ನಡೆಯಲಿದೆ. ದಿನನಿತ್ಯವೂ ಮಧ್ಯಾಹ್ನ 12ರಿಂದ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ನಿತ್ಯ ಅನ್ನಸಂತರ್ಪಣೆ
ಜೂ. 1ರಿಂದ 9ರ ತನಕ ಪ್ರತಿದಿನ ಸಾವಿರಾರು ಮಂದಿಗೆ ಮಧ್ಯಾಹ್ನ 12ರಿಂದ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದ್ದು ಬ್ರಹ್ಮಕಲಶೋತ್ಸವದಂದು ಮಧ್ಯಾಹ್ನ 12ರಿಂದ ರಾತ್ರಿ ಉತ್ಸವದ ತನಕ ಮಹಾಅನ್ನಸಂತರ್ಪಣೆ ನಡೆಯಲಿದೆ.

ಧರ್ಮ ವೇದಿಕೆಯಲ್ಲಿ ರಾಷ್ಟ್ರೀಯ ಚಿಂತನೆ
ಪ್ರತಿದಿನ ಸಂಜೆ 5.30ರಿಂದ ಧರ್ಮ ವೇದಿಕೆಯಲ್ಲಿ ರಾಷ್ಟ್ರದ ವಿವಿಧ ನಾಯಕರು ಮತ್ತು ಉಡುಪಿ ಅಷ್ಟ ಮಠಾಧೀಶರು ಹಾಗೂ ವಿವಿಧ ಸಮಾಜದ ಯತಿಗಳಿಂದ ರಾಷ್ಟ್ರ ಚಿಂತನೆ ಮತ್ತು ಧರ್ಮ ಚಿಂತನೆ ನಡೆಯಲಿದೆ.

ಅದರಲ್ಲೂ ವಿಶೇಷವಾಗಿ ದೇವಸ್ಥಾನಗಳನ್ನು ಸರ್ಕಾರ ಮತ್ತು ಧಾರ್ಮಿಕ ದತ್ತಿ ಇಲಾಖೆ ಸ್ವಾಯತ್ತತೆ ಮತ್ತು ಪಾರದರ್ಶಕ ಆಡಳಿತ ನಡೆಸಲು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರ ಸಹಿತ ಕನಿಷ್ಟ 3 ಮಂದಿ ವ್ಯವಸ್ಥಾಪನ ಸಮಿತಿ ಸದಸ್ಯರು ಭಾಗವಹಿಸಿ, ಎಲ್ಲರ ಅಭಿಪ್ರಾಯ ಕ್ರೋಢೀಕರಿಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲು ನಿಶ್ಚಯಿಸಲಾಗಿದೆ.

ಅದೇ ರೀತಿ ದೇವಸ್ಥಾನಗಳ ಪರಿಚಾರಕರು ಮತ್ತು ದೈವಸ್ಥಾನಗಳ ಪರಿಚಾರಕರ ಸಮಾವೇಶ, ಅರ್ಚಕರ ಸಮಾವೇಶ ನಡೆಸುವ ಮೂಲಕ ಅರ್ಥಪೂರ್ಣ ಧಾರ್ಮಿಕ ಚಿಂತನೆ ನಡೆಸಿ ಸರ್ಕಾರಕ್ಕೆ ದೇವಸ್ಥಾನಗಳ ಸಮಸ್ಯೆ ತಿಳಿಸಿ ಅದನ್ನು ಪರಿಹರಿಸಲು ಶ್ರೀಕ್ಷೇತ್ರದಿಂದ ದಿಟ್ಟ ಹೆಜ್ಜೆ ಇಡಲು ನಿರ್ಧರಿಸಲಾಗಿದೆ.

ಆ ಮೂಲಕ ದೇವಸ್ಥಾನಗಳು ಸಮಾಜಮುಖಿ ಮತ್ತು ಧಾರ್ಮಿಕ ರಾಷ್ಟ್ರೀಯ ಚಿಂತನೆಗಳ ಮೂಲಕ ನಡೆಸಲು ಸಹಕಾರಿಯಾಗುವಂತೆ ಯತ್ನಿಸಲಾಗುವುದು ಎಂದು ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ತಿಳಿಸಿದರು.

ಕೊಡೆ ಮೂಲಕ ಪ್ರಚಾರ
ಮಹೋತ್ಸವವನ್ನು ವಿಭಿನ್ನ ರೀತಿಯಲ್ಲಿ ಬಿಂಬಿಸುವ ಆಶಯದೊಂದಿಗೆ ಸುಮಾರು 3 ಸಾವಿರ ಛತ್ರಿ (ಕೊಡೆ)ಗಳ ಮೂಲಕ ಬ್ರಹ್ಮಕುಂಭಾಭಿಷೇಕದ ಪ್ರಚಾರ ವ್ಯವಸ್ಥೆ ಆಯೋಜಿಸಲಾಗಿದೆ. ಹೆದ್ದಾರಿಯ ಡಿವೈಡರ್ ಸೇರಿದಂತೆ ಅವಿಭಜಿತ ದ. ಕ. ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಕೊಡೆಗಳನ್ನು ಇರಿಸಲಾಗುವುದು.

ಕಾರ್ಯಕ್ರಮದ ತರುವಾಯ ಅದನ್ನು ಸಾರ್ವಜನಿಕರ ಬಳಕೆಗೆ ಕ್ಷೇತ್ರದ ಸ್ಮರಣಿಕೆಯಾಗಿ ನೀಡಲಾಗುವುದು ಎಂದು ರಾಘವೇಂದ್ರ ಕಿಣಿ ತಿಳಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!