Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ `ಹಡಿಲು ಭೂಮಿ ಆಂದೋಲನಕ್ಕೆ ಅಪಸ್ವರ ರೈತ ವಿರೋಧಿ ನಿಲುವು'

`ಹಡಿಲು ಭೂಮಿ ಆಂದೋಲನಕ್ಕೆ ಅಪಸ್ವರ ರೈತ ವಿರೋಧಿ ನಿಲುವು’

ಉಡುಪಿ: ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಹಡಿಲು ಭೂಮಿ ಕೃಷಿ ಯೋಜನೆ ವಿರೋಧಿಸುವ ಕಾಂಗ್ರೆಸ್ ನದು ರೈತ ವಿರೋಧಿ ನಿಲುವು ಎಂದು ಬಿಜೆಪಿ ಉಡುಪಿ ನಗರ ಅಧ್ಯಕ್ಷ ಮಹೇಶ ಠಾಕೂರ್ ಆರೋಪಿಸಿದ್ದಾರೆ.

ಇಡೀ ರಾಜ್ಯದಲ್ಲಿಯೇ ಯಾವ ಶಾಸಕನೂ ಮಾಡದ ಭಟ್ ಅವರ ಈ ವಿನೂತನ ಹೆಜ್ಜೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಅದನ್ನು ಸಹಿಸದ ಕಾಂಗ್ರೆಸ್ ನಾಯಕರು ಅಪ್ರಬುದ್ಧ ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಹಡಿಲು ಭೂಮಿ ಯೋಜನೆಯಿಂದ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಪಾಳುಬಿದ್ದಿರುವ ಸುಮಾರು 5 ಸಾವಿರ ಎಕರೆ ಬಂಜರು ಭೂಮಿಗೆ ಜೀವ ತುಂಬಲಿದ್ದು ಮುಂದಿನ 3 ವರ್ಷದಲ್ಲಿ ಇಡೀ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಕೃಷಿ ಭೂಮಿ ಹಸಿರಿನಿಂದ ನಳನಳಿಸಲಿದೆ. ಪ್ರತೀ ವರ್ಷ ಮೂರೂ ಬೆಳೆ ಬೆಳೆದು ಇಲ್ಲಿನ ರೈತರ ಬಾಳು ಹಸನಾಗಲಿದೆ ಮತ್ತು ದೇಶಕ್ಕೆ ಈ ಯೋಜನೆ ಮಾದರಿಯಾಗಲಿದೆ. ಅಲ್ಲದೆ, ದಶಕಗಳಿಂದ ಹೂಳು ತುಂಬಿದ ತೋಡುಗಳ ಹೂಳೆತ್ತುವ ಕಾರ್ಯ ಭರದಿಂದ ನಡೆಯುತ್ತಿದ್ದು ಮಳೆಗಾಲದಲ್ಲಿ ನೆರೆಯ ಸಮಸ್ಯೆಗೆ ಪರಿಹಾರ ದೊರಕಲಿದೆ. ಅಂತರ್ಜಲ ಮಟ್ಟದಲ್ಲೂ ಬೆಳವಣಿಗೆಯಾಗಲಿದೆ. ಅದರಿಂದಾಗಿ ಉಡುಪಿಯಲ್ಲಿ ಈಗ ಎದುರಿಸುತ್ತಿರುವ ನೀರಿನ ಸಮಸ್ಯೆಯೂ ಈ ಎಲ್ಲಾ ಕಾರಣಗಳಿಂದ ಕಡಿಮೆಯಾಗಲಿದೆ ಎಂದು ಠಾಕೂರ್ ಹೇಳಿದ್ದಾರೆ.

ಈಗಾಗಲೇ ಒಂದು ಸಾವಿರ ಎಕರೆಯಷ್ಟು ಬಂಜರು ಗದ್ದೆ ಸ್ವಚ್ಛ ಮಾಡಿ ಯಂತ್ರಗಳಿಂದ ಉಳುವ ಕಾರ್ಯವೂ ಭರದಿಂದ ಸಾಗುತ್ತಿದೆ. ಮಳೆಗಾಲಕ್ಕೂ ಮೊದಲು ಈ ಎಲ್ಲ ತಯಾರಿ ಆಗಬೇಕಾಗಿರುವುದರಿಂದ ಎಲ್ಲವೂ ಯೋಜನಾಬದ್ಧವಾಗಿ ಸಮಯೋಚಿತವಾಗಿ ನಡೆಯುತ್ತಿದೆ. ಈ ಯೋಜನೆಯಲ್ಲಿ ಶಾಸಕರು ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಜನಪ್ರತಿನಿಧಿಗಳನ್ನೂ ತೊಡಗಿಸಿಕೊಂಡಿದ್ದಾರೆ.

ಗ್ರಾಮಾಂತರ ಭಾಗದಲ್ಲಿ ಜನರು ಪಕ್ಷಾತೀತವಾಗಿ ಶಾಸಕರ ಜೊತೆ ಕೈಜೋಡಿಸಿದ್ದಾರೆ. ಆದರೆ, ನಗರ ಭಾಗದ ಕಾಂಗ್ರೆಸ್ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಭಾಗದಲ್ಲಿನ ಹಡಿಲು ಭೂಮಿ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸದೆ ರಾಜಕೀಯ ಪ್ರೇರಿತರಾಗಿ ರೈತ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಠಾಕೂರ್ ಮೂದಲಿಸಿದ್ದಾರೆ.

ಕೋವಿಡ್ ಹೋರಾಟ ನಿರಂತರ
ಶಾಸಕ ರಘುಪತಿ ಭಟ್ ಅವರ ಕೋವಿಡ್ ವಿರುದ್ಧದ ಹೋರಾಟ ನಿರಂತರವಾಗಿದ್ದು, ಅದರ ಪ್ರಥಮ ಅಲೆಯನ್ನು ಉಡುಪಿಯಲ್ಲಿ ಎದುರಿಸಲು ಅವರು ರೂಪಿಸಿದ ಪೂರ್ ಯೋಜನೆಗಳು ಐತಿಹಾಸಿಕ. ಇಂದು ಅದರ ಎರಡನೆಯ ಅಲೆ ತೀವ್ರವಾಗಿ ಹರಡಿರುವ ಸಂದರ್ಭದಲ್ಲಿ ಶಾಸಕರು ನಿರಂತರವಾಗಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಪ್ರತೀ ದಿನವೂ ಪ್ರಸ್ತುತ ಪರಿಸ್ಥಿತಿಯ ಅವಲೋಕನ ನಡೆಸಿ ಮುಂದಿನ ಯೋಜನೆಗಳನ್ನು ಸಿದ್ಧಪಡಿಸುತಿದ್ದಾರೆ. ಆಮ್ಲಜನಕ ಹಾಗು ವೆಂಟಿಲೇಟರ್ ವ್ಯವಸ್ಥೆ ಹತೋಟಿಗೆ ತರಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಆಸ್ಪತ್ರೆಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲನೆ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ಸೋಂಕಿತರ ರಕ್ಷಣೆ ಕಾರ್ಯಪಡೆಯೇ ಸಿದ್ಧವಾಗಿದ್ದು ಅದು ನಿರಂತರವಾಗಿ ಕೆಲಸ ಮಾಡುತ್ತಿದೆ.

ಲಸಿಕೆ ಉಪಲಬ್ಧತೆ ಸಮಸ್ಯೆ ಇಡೀ ದೇಶಕ್ಕೆ ಸವಾಲಾಗಿದ್ದು, ಅದರ ಶೀಘ್ರ ಪರಿಹಾರಕ್ಕಾಗಿ ಕೇಂದ್ರ ಸರಕಾರ ಮಟ್ಟದಲ್ಲಿ ಗಂಭೀರ ಪ್ರಯತ್ನ ನಡೆಯುತ್ತಿದೆ. ದೇಶಕ್ಕೆ ಲಸಿಕೆ ಪರಿಚಯಿಸಿದ ಆರಂಭದಲ್ಲಿ ಕಾಂಗ್ರೆಸ್ಸಿಗರೇ ಅದರ ವಿರುದ್ಧ ಅಪಪ್ರಚಾರ ಮಾಡಿ ಜನರನ್ನು ಲಸಿಕಾ ಕೇಂದ್ರಗಳಿಗೆ ತೆರಳದಂತೆ ಪ್ರೇರೇಪಿಸಿ ಈಗ ಬಾಲಿಶ ಹೇಳಿಕೆ ನೀಡಿ ಪುಕ್ಕಟೆ ಪ್ರಚಾರ ಪಡೆಯುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ.

ಇನ್ನಾದರೂ ಕಾಂಗ್ರೆಸ್ ನಾಯಕರು ಇಂಥ ಅಪ್ರಬುದ್ಧ ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡದೇ ಶಾಸಕರ ಜನಪರ ಕಾರ್ಯಕ್ರಮಗಳಿಗೆ ಪೂರಕವಾಗಿ ಹಾಗೂ ಕೊರೊನಾ ವಿರುದ್ಧದ ಅವರ ಹೋರಾಟದ ಜೊತೆ ಕೈಜೋಡಿಸಬೇಕೆಂದು ಮಹೇಶ್ ಠಾಕೂರ್ ಸಲಹೆ ನೀಡಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!