Sunday, July 3, 2022
Home ಸಮಾಚಾರ ಅಪರಾಧ ಕಾರು ಚಾಲಕನ ಸುಲಿಗೆ ಪ್ರಕರಣ: ನಾಲ್ವರ ದಸ್ತಗಿರಿ

ಕಾರು ಚಾಲಕನ ಸುಲಿಗೆ ಪ್ರಕರಣ: ನಾಲ್ವರ ದಸ್ತಗಿರಿ

ಸುದ್ದಿಕಿರಣ ವರದಿ
ಮಂಗಳವಾರ, ಮೇ 17

ಕಾರು ಚಾಲಕನ ಸುಲಿಗೆ ಪ್ರಕರಣ: ನಾಲ್ವರ ದಸ್ತಗಿರಿ
ಮಣಿಪಾಲ: ಬಾಡಿಗೆ ನೆಪದಿಂದ ಮಣಿಪಾಲದಿಂದ ಕಾರವಾರಕ್ಕೆ ಕರೆದೊಯ್ದ ಕಾರು ಚಾಲಕನನ್ನು ಸುಲಿಗೆ ಮಾಡಿದ ತಂಡದ ನಾಲ್ವರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರು ಉಳ್ಳಾಲದ ಚರಣ್‌ (35), ಶಿರ್ವದ ಮೊಹಮ್ಮದ್‌ ಅಜರುದ್ದೀನ್‌ (39), ಬಂಟ್ವಾಳದ ಶರತ್‌ ಪೂಜಾರಿ (36) ಮತ್ತು ಮಂಗಳೂರಿನ ಜಯಪ್ರಸಾದ್‌ (43) ಎಂದು ಗುರುತಿಸಲಾಗಿದೆ.

80ಬಡಗಬೆಟ್ಟು ಶಾಂತಿನಗರದ ಶ್ರೀಧರ ಭಕ್ತ ಎಂಬವರು ಮಣಿಪಾಲ ಟೈಗರ್ ಸರ್ಕಲ್ ಬಳಿ ಕಳೆದ ಏ.27ರಂದು ಸಂಜೆ ತನ್ನ ಕಾರನ್ನು ಬಾಡಿಗೆಗೆ ನಿಲ್ಲಿಸಿದ್ದು, ಸುಮಾರು 35ರಿಂದ 45 ವರ್ಷ ಪ್ರಾಯದ ತುಳು ಭಾಷೆ ಮಾತನಾಡುವ ನಾಲ್ವರು ಮಂದಿ ಬಂದು, ಕಾರವಾರಕ್ಕೆ ಹೋಗಲು ಬಾಡಿಗೆಗೆ ಕಾರು ಗೊತ್ತುಮಾಡಿ ಕರೆದುಕೊಂಡು ಹೋಗಿದ್ದರು.

ರಾತ್ರಿ 8.40ರ ಸುಮಾರಿಗೆ ಅಂಕೋಲ ರೈಲ್ವೆ ನಿಲ್ದಾಣ ಸಮೀಪ ಆರೋಪಿಗಳು ಕಾರು ನಿಲ್ಲಿಸಲು ಹೇಳಿ, ಹಿಂಬದಿಯಲ್ಲಿದ್ದ ಒಬ್ಬ ವ್ಯಕ್ತಿ ಶ್ರೀಧರ ಭಕ್ತ ಅವರ ಕುತ್ತಿಗೆ ಒತ್ತಿಹಿಡಿದು, ಉಳಿದ ಮೂವರು ಅವರನ್ನು ಚಾಲಕ ಸೀಟಿನಿಂದ ಹಿಂದಿನ ಸೀಟಿಗೆ ಎಳೆದು ಕುಳ್ಳಿರಿಸಿದ್ದರು.

ನಂತರ ಚೂರಿ ತೋರಿಸಿ, ಶ್ರೀಧರ ಭಕ್ತ ಪರ್ಸ್‌ನಲ್ಲಿದ್ದ 3 ಸಾವಿರ ರೂ. ನಗದು ಹಾಗೂ ಕೈಯಲ್ಲಿದ್ದ ವಾಚ್ ಎಗರಿಸಿಕೊಂಡಿದ್ದರು.

ಬಳಿಕ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಕಾರು ಚಲಾಯಿಸಿಕೊಂಡು ರಾತ್ರಿ 11.30ರ ಸುಮಾರಿಗೆ ಕುಂದಾಪುರ ಸಮೀಪದ ಆನೆಗುಡ್ಡೆಗೆ ಕರೆದುಕೊಂಡು ಬಂದಿದ್ದು, ಎಟಿಎಂ ಬಳಿ ಕಾರು ನಿಲ್ಲಿಸಿ ಹಣ ತೆಗೆದು ತರುವಂತೆ ಶ್ರೀಧರ ಭಕ್ತ ಅವರಿಗೆ ಹೇಳಿದ್ದರು.

ಕಾರಿನಿಂದ ಇಳಿದು ಎ.ಟಿ.ಎಂ ಒಳಗೆ ಹೋದ ಶ್ರೀಧರ ಭಕ್ತ, ಹೊರಗೆ ಬರುವಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು ಎಂದು ಶ್ರೀಧರ ಭಕ್ತ ಅವರು ಮಣಿಪಾಲ ಠಾಣೆಯಲ್ಲಿ ದೂರು ನೀಡಿದ್ದರು.

ಶ್ರೀಧರ ಭಕ್ತ ದೂರಿನಂತೆ ಕಾರ್ಯಪ್ರವೃತ್ತರಾದ ಮಣಿಪಾಲ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಉಡುಪಿ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಹಾಗೂ ಹೆಚ್ಚುವರಿ ಎಸ್ ಪಿ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಉಡುಪಿ ಉಪವಿಭಾಗ ಡಿವೈಎಸ್.ಪಿ ಸುಧಾಕರ ನಾಯಕ್‌ ನೇತೃತ್ವದಲ್ಲಿ ಮಣಿಪಾಲ ಪೊಲೀಸ್‌ ನಿರೀಕ್ಷಕ ಮಂಜುನಾಥ್‌, ಉಪನಿರೀಕ್ಷಕ ರಾಜಶೇಖರ್‌ ವಂದಲಿ, ಸಿಬಂದಿಗಳಾದ ಶೈಲೇಶ್‌, ನಾಗೇಶ್‌ ನಾಯ್ಕ್‌, ಪ್ರಸನ್ನ, ಇಮ್ರಾನ್‌ ಮತ್ತು ಪ್ರಸಾದ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!