ಉಡುಪಿ: ಜಿಲ್ಲೆಯ ಹಿರಿಯ ರಾಜಕಾರಣಿ, ಪ್ರಾಮಾಣಿಕ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ಸಿಗಲೇಬೇಕು. ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಮ್ಮ ಪ್ರೀತಿಪೂರ್ವಕ ಆಗ್ರಹ.
ಇದು ಹಾಲಾಡಿ ಅಭಿಮಾನಿಗಳ ಒಕ್ಕೊರಳ ಒತ್ತಾಯ.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹಾಲಾಡಿ ಅಭಿಮಾನಿಗಳಲ್ಲೋರ್ವರಾದ ಸುಶಾಂತ್ ಅಚ್ಲಾಡಿ, 1999ರಿಂದ ಕುಂದಾಪುರ ವಿಧಾನಸಭಾ ಕ್ಷೇತ್ರವನ್ನು ಸತತವಾಗಿ 5 ಬಾರಿ ಶಾಸಕನಾಗಿ ಪ್ರನಿನಿಧಿಸುತ್ತಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರಾಮಾಣಿಕ ವ್ಯಕ್ತಿ.
ಬಿಜೆಪಿಗೊಂದು ಅವಕಾಶ
ಅವರೆಂದೂ ಜಾತಿ ರಾಜಕಾರಣ ಮಾಡಿದವರಲ್ಲ. ಅವರ ವಿರುದ್ಧ ಯಾವುದೇ ಹಗರಣಗಳಿಲ್ಲ. ಶಾಸಕನಾಗಿ ಯಾವುದೇ ಕಪ್ಪುಚುಕ್ಕೆ ಇಲ್ಲ. ಕಾಂಗ್ರೆಸ್ ನ ಪ್ರತಾಪಚಂದ್ರ ಶೆಟ್ಟಿಯಂಥ ರಾಜಕಾರಣಿಯನ್ನು 1,000 ಮತಗಳ ಅಂತರದಿಂದ ಸೋಲಿಸಿದ ಹಾಲಾಡಿ, ಪ್ರತೀ ಚುನಾವಣೆಯಲ್ಲೂ ಕುಂದಾಪುರ ಕ್ಷೇತ್ರದಲ್ಲಿ ಗರಿಷ್ಟ ಮತಗಳ ಅಂತರದಿಂದ ಗೆಲುವು ಸಾಧಿಸಿದ ವಿಕ್ರಮಿ.
ಈ ಹಿಂದೆ ಸಚಿವ ಸ್ಥಾನ ನೀಡುವುದಾಗಿ ಹೇಳಿ, ಕೈಕೊಟ್ಟಿದ್ದ ಬಿಜೆಪಿಗೆ ಇದೊಂದು ಅವಕಾಶ. ಮುಂದಿನ ಚುನಾವಣೆಯಲ್ಲಿ ಹಾಲಾಡಿ ಸ್ಪರ್ಧೆ ಮಾಡುತ್ತಾರೆ ಎಂಬುದೂ ಖಾತ್ರಿ ಇಲ್ಲ. ಹಾಗಾಗಿ ಶಾಸಕತ್ವದ ಅವಧಿಯಲ್ಲಿ ಒಮ್ಮೆಯಾದರೂ ಅವರು ಸಚಿವರಾಗಲೇಬೇಕು ಎಂಬುದು ಅವರ ಅಭಿಮಾನಿಗಳಾದ ನಮ್ಮೆಲ್ಲರ ಒತ್ತಾಸೆ ಎಂದು ಅಚ್ಲಾಡಿ ಹೇಳಿದರು.
ಆಕ್ರೋಶ ಇಲ್ಲ
ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ಸಿಗಬೇಕೆಂಬುದು ಹಾಲಾಡಿಯವರ ಲಕ್ಷಾಂತರ ಅಭಿಮಾನಿಗಳ ಆಸೆ. ಈ ಕುರಿತಂತೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಗೊಂಡಿದೆ. ಮಾತ್ರವಲ್ಲದೇ, ಸಚಿವ ಸ್ಥಾನ ನೀಡುವಂತೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ನೀಡಲಾಗುವುದು.
ಅಷ್ಟಕ್ಕೂ ಹಾಲಾಡಿಯವರಿಗೆ ಸಚಿವ ಸ್ಥಾನ ನೀಡದಿದ್ದಲ್ಲಿ ನಾವೇನೂ ಆಕ್ರೋಶ ಮನೋಭಾವ ತಳೆಯುವುದಿಲ್ಲ. ಅಹಿಂಸಾತ್ಮಕ ಹಾದಿ ತುಳಿಯುವುದಿಲ್ಲ. ಅದನ್ನೆಲ್ಲ ಶಾಸಕ ಹಾಲಾಡಿ ಸಹಿಸುವುದೂ ಇಲ್ಲ ಎಂದು ಅಚ್ಲಾಡಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಯೋಗೀಶ, ಕೀರ್ತೀಶ್ ಪೂಜಾರಿ ಕೋಟ, ತೀರ್ಥನ್ ದೇವಾಡಿಗ ವಡ್ಡರ್ಸೆ ಇದ್ದರು