Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ದ್ವೇಷ ರಾಜಕೀಯದ ಕೈಗನ್ನಡಿ

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ದ್ವೇಷ ರಾಜಕೀಯದ ಕೈಗನ್ನಡಿ

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ದ್ವೇಷ ರಾಜಕೀಯದ ಕೈಗನ್ನಡಿ

(ಸುದ್ದಿಕಿರಣ ವರದಿ)
ಉಡುಪಿ: ಇಂದಿರಾ ಕ್ಯಾಂಟೀನ್‌ ಹೆಸರು ಬದಲಾಯಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಮುಖ್ಯಮಂತ್ರಿಗೆ ಸಲಹೆ ನೀಡಿರುವುದು ದ್ವೇಷ ರಾಜಕೀಯಕ್ಕೆ ಹಿಡಿದ ಕೈಗನ್ನಡಿ ಎಂದು ಕೆಪಿಸಿಸಿ ಪ್ಯಾನಲಿಸ್ಟ್‌ ವೆರೋನಿಕಾ ಕರ್ನೇಲಿಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರ ಬಡವರ ಹಸಿವು ನೀಗಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟಿನ್‌ ಆರಂಭಿಸಿದ್ದು, ಈವರೆಗೆ ಉತ್ತಮ ಸೇವೆ ನೀಡಿದೆ.

ಸಿದ್ದರಾಮಯ್ಯ ದೂರದೃಷ್ಟಿತ್ವದ ಫಲವಾಗಿ ಬಡವರು ಮತ್ತು ಮಧ್ಯಮ ವರ್ಗದವರು ಕಡಿಮೆ ಹಣದಲ್ಲಿ ಉತ್ತಮ ಆಹಾರ ಪಡೆಯುವ ಯೋಜನೆಗೆ ಇಂದಿರಾ ಕ್ಯಾಂಟಿನ್‌ ಎಂದು ಹೆಸರಿಟ್ಟಿರುವುದು ಬಿಜೆಪಿಗರ ಕಣ್ಣು ಕುಕ್ಕುವಂತಾಗಿದೆ.

ಬಡವರಿಗೆ ಆಹಾರ ನೀಡುವ ಸಲುವಾರಿ ಇಂದಿರಾ ಕ್ಯಾಂಟಿನ್‌ ಆರಂಭಿಸಿದಾಗಲೂ ಆಕ್ಷೇಪಾರ್ಹ ಧ್ವನಿ ಎತ್ತಿದ್ದ ಬಿಜೆಪಿ, ಈಗ ಹೆಸರಿನ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವುದು ದೇಶಕ್ಕೆ ಕೊಡುಗೆ ನೀಡಿದವರ ಬಗ್ಗೆ ಬಿಜೆಪಿ ಯಾವ ರೀತಿಯ ಭಾವನೆ ಹೊಂದಿದೆ ಎನ್ನುವುದನ್ನು ತೋರಿಸುತ್ತದೆ ಎಂದು ವೆರೊನಿಕಾ ವಿಷಾದಿಸಿದ್ದಾರೆ.

ಇಂದಿರಾಗಾಂಧಿ ಪ್ರಧಾನಿಯಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಅವಧಿಯಲ್ಲಿ ರಾಜ್ಯದೆಲ್ಲೆಡೆ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ ಹೆಸರನ್ನು ಬದಲಿಸಲು ಹೊರಟಿರುವುದು ಖಂಡನೀಯ.

ಈಚೆಗೆ ಮೋದಿ ಸರಕಾರ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಿನಲ್ಲಿದ್ದ ಖೇಲ್‌ ರತ್ನ ಪ್ರಶಸ್ತಿಯನ್ನು ಏಕಾಏಕಿ ಮರು ನಾಮಕರಣ ಮಾಡಿರುವುದು ನೋಡುವಾಗ ದೇಶಕ್ಕೆ ಕೊಡುಗೆ ನೀಡಿದ ಕಾಂಗ್ರೆಸ್‌ ನಾಯಕರನ್ನು ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಸಿ.ಟಿ. ರವಿಯವರಿಗೆ ನಿಜವಾಗಿ ಕಾಳಜಿ ಇದ್ದರೆ ಮೋದಿ ಹೆಸರಿನಲ್ಲಿ ನಾಮಕರಣ ಮಾಡಿರುವ ಕ್ರೀಡಾಂಗಣಕ್ಕೆ ಕ್ರೀಡಾಳುಗಳ ಹೆಸರನ್ನಿಡುವಂತೆ ಪ್ರಯತ್ನಪಡಲಿ. ಅದನ್ನು ಬಿಟ್ಟು ದೇಶಕ್ಕೆ ಕೊಡುಗೆ ನೀಡಿದ ಕಾಂಗ್ರೆಸ್‌ ನಾಯಕರ ಹೆಸರನ್ನು ಬದಲಿಸುವ ಮೂಲಕ ದ್ವೇಷ ರಾಜಕಾರಣ ಮಾಡುವುದನ್ನು ಕೈಬಿಡಲಿ ಎಂದು ವೆರೊನಿಕಾ ಆಗ್ರಹಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!