(ಸುದ್ದಿಕಿರಣ ವರದಿ)
ಉಡುಪಿ, ನ. 10: ಭಾರತದ ಮಹಾನ್ ಗ್ರಂಥಗಳಲ್ಲೊಂದಾದ ಮಹಾಭಾರತದ ಪ್ರತಿಯನ್ನು ದೇಶದ ಶಕ್ತಿಕೇಂದ್ರವಾದ ಸಂಸತ್ ಭವನದ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿರುವುದು ಅತೀವ ಸಂತಸ ತಂದಿದೆ ಎಂದು ಪಲಿಮಾರು ಮಠದ ಹಿರಿಯ ಯತಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಸುದ್ದಿಕಿರಣ.ಕಾಂನೊಂದಿಗೆ ಮಾತನಾಡಿದ ಅವರು, ತಮ್ಮ ದ್ವಿತೀಯ ಪರ್ಯಾಯದ ಮಹತ್ತರ ಯೋಜನೆಗಳಲ್ಲೊಂದಾದ ಮಹಾಭಾರತ ಗ್ರಂಥ ಪರಿಷ್ಕರಣೆಯ ಕಾರ್ಯ ಅನೇಕ ವಿದ್ವಾಂಸರ ಪ್ರಯತ್ನದ ಫಲವಾಗಿ ಮೂಡಿಬಂದಿದೆ. ಲೋಕಕ್ಕೆ ಆಧ್ಯಾತ್ಮಿಕ ಸಂದೇಶ ನೀಡಿದ ಆಚಾರ್ಯ ಮಧ್ವರ ಉಡುಪಿಯಿಂದಲೇ ದೆಹಲಿಯ ಸಂಸತ್ ಭವನಕ್ಕೆ ಮಹಾಭಾರತದ ಕೃತಿ ಕೊಡುಗೆಯ ಮೂಲಕ ಭಾರತೀಯ ಸಂಸ್ಕೃತಿ ಸಂರಕ್ಷಣೆಯ ಸಂದೇಶ ರವಾನೆಯಾಗಿದೆ ಎಂದು ಶ್ರೀಗಳು ಸಂತಸ ವ್ಯಕ್ತಪಡಿಸಿದರು