Saturday, August 13, 2022
Home ಸಮಾಚಾರ ರಾಜ್ಯ ವಾರ್ತೆ ಕಾಶಿ ಯಾತ್ರಾರ್ಥಿಗಳಿಗೆ 5 ಸಾವಿರ ರೂ. ಸಹಾಯಧನ ಯೋಜನೆ ಜಾರಿ

ಕಾಶಿ ಯಾತ್ರಾರ್ಥಿಗಳಿಗೆ 5 ಸಾವಿರ ರೂ. ಸಹಾಯಧನ ಯೋಜನೆ ಜಾರಿ

ಸುದ್ದಿಕಿರಣ ವರದಿ
ಗುರುವಾರ, ಜುಲೈ 14

ಕಾಶಿ ಯಾತ್ರಾರ್ಥಿಗಳಿಗೆ 5 ಸಾವಿರ ರೂ. ಸಹಾಯಧನ ಯೋಜನೆ ಜಾರಿ
ಬೆಂಗಳೂರು: ರಾಜ್ಯದಿಂದ ಕಾಶಿ ಯಾತ್ರೆಗೆ ತೆರಳುವವರಿಗೆ ರಾಜ್ಯ ಸರ್ಕಾರ ತಲಾ 5 ಸಾವಿರ ರೂ. ಸಹಾಯಧನ ಯೋಜನೆ ಘೋಷಿಸೆದೆ. ಆ ಯೋಜನೆಗೆ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕಾಶಿ ಯಾತ್ರಾರ್ಥಿಗಳಿಗೆ ಸಹಾಯಧನದ ಚೆಕ್ ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.

ಮುಜರಾಯಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದೊಂದು ಹೊಸ ಕಾರ್ಯಕ್ರಮ. ಇತ್ತೀಚೆಗೆ ಕಾಶಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಪೂರ್ಣವಾಗಿ ನವೀಕರಣ ಮಾಡಿದ್ದಾರೆ. ಕಾಶಿ ಶ್ರದ್ಧಾಸ್ಥಳ. ಬಹಳಷ್ಟು ಜನ ವಿಶ್ವಾಸ, ನಂಬಿಕೆ ಇಟ್ಟಿದ್ದಾರೆ.

ಮೊದಲು ಏನೂ ವ್ಯವಸ್ಥೆ ಇಲ್ಲದೇ ಇದ್ದಾಗ ಅಂತಿಮ ಯಾತ್ರೆ ಅಂತ ಹೋಗುತ್ತಿದ್ದರು. ಈಗ ಬಹಳಷ್ಟು ಬದಲಾವಣೆ ಆಗಿದೆ. ನೇರವಾಗಿ ವಾರಣಾಸಿಗೆ ವಿಮಾನ, ರೈಲು, ಬಸ್ ವ್ಯವಸ್ಥೆಯಾಗಿದೆ. ಅದರಿಂದ ಕಾಶಿ ಯಾತ್ರಿಕರ ಸಂಖ್ಯೆ ಹೆಚ್ಚಾಗುತ್ತಿದೆ.

ಇಂದು ಕಾಶಿ ಯಾತ್ರೆಗೆ ಹೋಗಿ ಬಂದ 10 ಮಂದಿಗೆ ಚೆಕ್ ವಿತರಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನೇರವಾಗಿ ಡಿ.ಬಿ.ಟಿ ಮೂಲಕ ಆನ್ ಲೈನ್ ನಲ್ಲಿ ಹಣ ವರ್ಗಾವಣೆ ಆಗಲಿದೆ ಎಂದರು.

ಕಾಶಿ ಗಂಗಾ ತಟವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ. ಸುಮಾರು 23 ಘಾಟ್ ಗಳನ್ನು ನವೀಕರಿಸಿ, ನೇರವಾಗಿ ರಸ್ತೆ ಮೂಲಕ ವಿಶ್ವನಾಥನ ದೇವಸ್ಥಾನಕ್ಕೆ ಹೋಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಆ ಕಾರ್ಯಕ್ರಮದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಿಎಂ ಬೊಮ್ಮಾಯಿ ಹೇಳಿದರು.

ಸುರಕ್ಷಿತ ಕಾಶಿ ಯಾತ್ರೆಗೆ ಒತ್ತು
ಕರ್ನಾಟಕದಿಂದ ಕಾಶಿಗೆ ತೆರಳುವ ಯಾತ್ರಾರ್ಥಿಗಳಿಗೆ ಕೇವಲ ಸಹಾಯಧನ 5 ಸಾವಿರ ರೂ. ಕೊಡುವುದಷ್ಟೇ ಅಲ್ಲ. ಸುರಕ್ಷಿತವಾಗಿ ರೈಲಿನಲ್ಲಿ ಕರೆದುಕೊಂಡು ಹೋಗುವುದು, ಯಾತ್ರೆ ದಾರಿಯಲ್ಲಿ ಮತ್ತು ಅಲ್ಲಿರುವ ಕರ್ನಾಟಕ ಛತ್ರದಲ್ಲಿ ಉತ್ತಮ ವ್ಯವಸ್ಥೆ ಇದೆ.

ಯಾವುದೇ ಅವ್ಯವಹಾರ ನಡೆಯದಂತೆ ಯಾತ್ರೆಗೆ ತೆರಳಿ, ಮರಳಿ ಬರುವಾಗ ರಸೀದಿ ತರುವ ವ್ಯವಸ್ಥೆ ಮಾಡಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಆನ್ ಲೈನ್ ಹಣ ವರ್ಗಾವಣೆ
ಇದೇ ಸಂದರ್ಭದಲ್ಲಿ ಕಾಶಿ ಯಾತ್ರಾರ್ಥಿಗಳಿಗೆ ಸಹಾಯಧನವನ್ನು ನೇರವಾಗಿ ಡಿ.ಬಿ.ಟಿ. ಮೂಲಕ ಆನ್ ಲೈನ್ ನಲ್ಲಿ ವರ್ಗಾವಣೆ ಮಾಡಿದರು.

ಈ ಸಂದರ್ಭದಲ್ಲಿ ಜಲಸಂಪನ್ಮೂಲ ಖಾತೆ ಸಚಿವ ಗೋವಿಂದ ಎಂ. ಕಾರಜೋಳ, ಧಾರ್ಮಿಕ ದತ್ತಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಕಂದಾಯ ಇಲಾಖೆ ಪ್ರಧಾನ ಕಾರ್ಯದಶರ್ಿ ಎಸ್. ಉಮಾಶಂಕರ್, ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ದಾಸರಿ ಸಿಂಧೂರಿ ಹಾಗೂ ಕಾಶಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳು ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!