Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ಕೊಡವೂರು ಬ್ರಾಹ್ಮಣ ಮಹಾಸಭಾ ರಜತೋತ್ಸವ ಸಮಾರೋಪ

ಕೊಡವೂರು ಬ್ರಾಹ್ಮಣ ಮಹಾಸಭಾ ರಜತೋತ್ಸವ ಸಮಾರೋಪ

ಸುದ್ದಿಕಿರಣ ವರದಿ
ಶನಿವಾರ, ಏಪ್ರಿಲ್ 16

ಕೊಡವೂರು ಬ್ರಾಹ್ಮಣ ಮಹಾಸಭಾ ರಜತೋತ್ಸವ ಸಮಾರೋಪ
ಉಡುಪಿ: ನಮ್ಮ ಪೂರ್ವಜರು ಮಾಡಿದ ಪುಣ್ಯದ ಫಲವನ್ನು ನಾವೀಗ ಅನುಭವಿಸುತ್ತಿದ್ದೇವೆ. ಅದೇ ರೀತಿ ನಮ್ಮ ಮುಂದಿನ ಪೀಳಿಗೆ ಸುಖ, ಸಂತಸದಿಂದ ಇರಬೇಕೆಂದಾದಲ್ಲಿ ನಾವು ನಮ್ಮ ಸಂಸ್ಕೃತಿ, ಆಚಾರ ವಿಚಾರ, ಸಂಪ್ರದಾಯಗಳನ್ನು ಉಳಿಸಿ ಬೆಳೆಸಬೇಕಾದ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.

ಕೊಡವೂರು ಬ್ರಾಹ್ಮಣ ಮಹಾಸಭಾದ ರಜತ ಮಹೋತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಇದೇ ಸಂದರ್ಭದಲ್ಲಿ ರಜತೋತ್ಸವದ ಸವಿನೆನಪಿಗಾಗಿ ಸಂಸ್ಥೆ ಹೊರತಂದ ರಜತ ಸ್ಮೃತಿ ಸ್ಮರಣಸಂಚಿಕೆ ಅನಾವರಣಗೊಳಿಸಿದರು.

ಮುಖ್ಯ ಅತಿಥಿಯಾಗಿದ್ದ ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿ ಸಹಾಯಕ ಮುಖ್ಯ ವ್ಯವಸ್ಥಾಪಕ ರಾಜಗೋಪಾಲ ಭಟ್, ಸಾರ್ಥಕ ಇಪ್ಪತ್ತೈದು ವರ್ಷ ಪೂರೈಸಿದ ಬ್ರಾಹ್ಮಣ ಮಹಾಸಭಾಕ್ಕೆ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯ, ಉಡುಪಿ ತಾಲೂಕು ಹಾಗೂ ಜಿಲ್ಲೆಯ ಎಲ್ಲ ವಲಯಗಳಿಗಿಂತ ಸದಾ ಮುಂಚೂಣಿಯಲ್ಲಿರುವ ಕೊಡವೂರು ವಲಯದ ಕಾರ್ಯವೈಖರಿ ಅನುಕರಣೀಯ ಎಂದು ಶ್ಲಾಘಿಸಿದರು.

ಶ್ರುತಿ ಸುಕುಮಾರ್ ಪ್ರಾರ್ಥಿಸಿದರು. ರಜತೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ರಾವ್ ರಜತೋತ್ಸವ ವರ್ಷದ ವರದಿ ವಾಚಿಸಿದರು.

ವಿಸ್ತೃತ ವಿಪ್ರಶ್ರೀ ಸಭಾಂಗಣ, ಕಾರ್ಯಾಲಯ ಹಾಗೂ ಸತ್ಯಶ್ರೀ ಕಿರು ಸಭಾಂಗಣ ಕಟ್ಟಡದ ಅಭಿಯಂತರ ಶ್ರೀಧರ ಆಚಾರ್ಯ, ಬ್ರಾಹ್ಮಣ ಮಹಾಸಭಾ ಲೆಕ್ಕಪರಿಶೋಧಕ ಪ್ರಶಾಂತ್ ಹೊಳ್ಳ, ದೈವ ದೇವರುಗಳ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕೃಷ್ಣ ಮಡಿವಾಳ, ಹಲವಾರು ವರ್ಷದಿಂದ ಬಳೆ ವ್ಯಾಪಾರ ಮಾಡುತ್ತಿರುವ ಯಶೋದಾ ಜೋಗಿ ಅವರನ್ನು ಸನ್ಮಾನಿಸಲಾಯಿತು.

ಬ್ರಾಹ್ಮಣ ಮಹಾಸಭಾದ ಸ್ಥಾಪಕರನ್ನು, ಅದರ ಏಳಿಗೆಗೆ ಕಾರಣರಾಗಿ ಇದೀಗ ನಮ್ಮನ್ನು ಅಗಲಿದ ಹಿರಿಯ ಚೇತನಗಳನ್ನು ಸ್ಮರಿಸಲಾಯಿತು.

ಕಳೆದ ಇಪ್ಪತ್ತೈದು ವರ್ಷ ಕಾಲ ಸಮಿತಿಯನ್ನು ಮುನ್ನಡೆಸಿದ ಅಧ್ಯಕ್ಷ, ಕಾರ್ಯದರ್ಶಿಯವರನ್ನು ಗುರುತಿಸಿ, ಅಭಿನಂದಿಸಲಾಯಿತು.

ಕೊರೊನಾ ಸಂದರ್ಭದಲ್ಲಿ ನಡೆಸಿದ ಅಂತರ ವಲಯ ಆನ್ ಲೈನ್ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧಾ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಕಳೆದ ವರ್ಷದ ಆಯವ್ಯಯ ಮಂಡನೆಯನ್ನು ಕೋಶಾಧ್ಯಕ್ಷ ಪ್ರಜ್ವಲ್ ಮಾಡಿದರು.

ಬಳಿಕ ಸಮಿತಿಯ ಈ ವರ್ಷದ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಈ ಸಂದರ್ಭದಲ್ಲಿ ಜೋಸ್ ಅಲುಕ್ಕಾಸ್ ಸಂಸ್ಥೆಯ ವತಿಯಿಂದ ಎರಡು ದೊಡ್ಡ ಗೋಡೆ ಗಡಿಯಾರ ಸ್ವೀಕರಿಸಲಾಯಿತು.

ಗೋಮಾತೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ 25 ಸಾವಿರ ಗೋಗ್ರಾಸ ನಿಧಿಯನ್ನು ನೀಲಾವರ ಗೋಶಾಲೆಗೆ ಶ್ರೀಪಾದರ ಮೂಲಕ ಹಸ್ತಾಂತರಿಸಲಾಯಿತು.

ಪ್ರಸಕ್ತ ವರ್ಷದ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ನಡೆಯಿತು.

ನಿರ್ಗಮನ ಕಾರ್ಯದರ್ಶಿ ಶ್ರೀನಿವಾಸ ಬಾಯರಿ ಪ್ರಕಟಣೆ ಪ್ರಕಟಿಸಿದರು. ನೂತನ ಅಧ್ಯಕ್ಷ ಶ್ರೀನಿವಾಸ ಉಪಾಧ್ಯಾಯ ಪದ ಸ್ವೀಕಾರ ಮಾತುಗಳನ್ನಾಡಿದರು. ನಿರ್ಗಮನ ಅಧ್ಯಕ್ಷ ನಾರಾಯಣ ಬಲ್ಲಾಳ ಅನಿಸಿಕೆ ಹಂಚಿಕೊಂಡರು. ಗೌರವಾಧ್ಯಕ್ಷರಾದ ಪಿ. ಗುರುರಾಜ ರಾವ್ ಮತ್ತು ಗೋವಿಂದ ಐತಾಳ್ ವೇದಿಕೆಯಲ್ಲಿದ್ದರು.
ರಜತೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಭಟ್ಟ ಸ್ವಾಗತಿಸಿ, ನೂತನ ಕಾರ್ಯದರ್ಶಿ ಪೂರ್ಣಿಮಾ ಜನಾರ್ದನ ನಿರೂಪಿಸಿ, ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಹಿರಿಯಡ್ಕ ಸಿರಿ ಸಂಸ್ಕೃತಿ ಟ್ರಸ್ಟ್ ಪ್ರಾಯೋಜಿತ ನೃತ್ಯ ರೂಪಕ ನಾರಸಿಂಹ ಕಥಾನಕವನ್ನು ನೃತ್ಯ ನಿಕೇತನ ಕೊಡವೂರು ತಂಡದವರು ಪ್ರದರ್ಶಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!