ಉಡುಪಿ: ಬುಡಕಟ್ಟು ಜನಾಂಗದವರು ಯಶಸ್ಸು ಸಾಧಿಸಬೇಕಾದಲ್ಲಿ ಒಗ್ಗಟ್ಟಿನಿಂದಿರಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರ ದಿನಕರ ಬಾಬು ಹೇಳಿದರು.
ಶುಕ್ರವಾರ ಇಲ್ಲಿನ ಎಂಜಿಎಂ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕೊರಗ ಸಂಘಟನೆ ಸಂಯುಕ್ತಾಶ್ರಯದಲ್ಲಿ ಮೊತ್ತಮೊದಲ ಬಾರಿಗೆ ನಡೆದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮೂರು ದಿನಗಳವಧಿಯ ಕೊರಗ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಉತ್ಸವ ಅಂಗವಾಗಿ ಆಯೋಜಿಸಲಾದ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಬುಡಕಟ್ಟು ಜನಾಂಗಗಳನ್ನು ಮುಖ್ಯವಾಹಿನಿಗೆ ತರುವ ಆಶಯದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕೊರಗ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಯಾವಾಗಲೂ ಬದ್ಧವಾಗಿದೆ. ಈ ಸಮುದಾಯದ ಯುವಜನತೆ ಉತ್ಸಾಹ ತೋರಿಸಬೇಕು. ಕ್ರೀಡೆಯಲ್ಲಿ ಉತ್ಸಾಹದಿಂದ ಭಾಗವಹಿಸುವ ರೀತಿಯಲ್ಲಿ ಸಮಾಜ ಕಟ್ಟುವ ಕಾರ್ಯಗಳಲ್ಲಿಯೂ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಕ್ರೀಡೋತ್ಸವದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ, ಉತ್ತಮ ತರಬೇತಿ ನೀಡಿ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಲು ಬೇಕಾಗುವ ಹಣದ ಸಹಾಯವನ್ನು ಸರ್ಕಾರ ಅಥವಾ ಐ.ಟಿ.ಡಿ.ಪಿ. ಇಲಾಖೆ ವತಿಯಿಂದ ನೀಡಲಾಗುವುದು ಎಂದು ಡಿಸಿ ಹೇಳಿದರು.
ಕೊರಗ ಸಮುದಾಯದವರಲ್ಲಿ ಅಭಿವೃದ್ಧಿಯಾಗುವ ಛಲ ಕಂಡುಬರುತ್ತಿದೆ. ಕ್ರೀಡೆ ಜೊತೆಗೆ ತಮ್ಮ ಸಾಂಸ್ಕೃತಿಕ ಕಲೆಗಳನ್ನೂ ಉಳಿಸಿ ಬೆಳೆಸಬೇಕು ಎಂದು ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರ ನಾಯಕ್ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮುದಾಯದ ಬಾಬು ಪಾಂಗಾಳ, ಕೊರಗ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಉದ್ದೇಶ ಕೊರಗ ಸಮುದಾಯದ ಯುವಕರನ್ನು ಮುಖ್ಯವಾಹಿನಿಗೆ ತರುವುದು ಮತ್ತು ಅವರನ್ನು ಅಭಿವೃದ್ಧಿಶೀಲರನ್ನಾಗಿ ಮಾಡುವುದು. ಸಮುದಾಯದವರು ಕಾಲಹರಣ ಮಾಡದೆ ಸಮಾಜಸೇವೆಯಲ್ಲಿ ತೊಡಗಿಕೊಳ್ಳಬೇಕು. ರಕ್ತದಾನದಂಥ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.
ಯುವಕರು ಕೇವಲ ಕ್ರೀಡೆಗಳಿಗೆ ಸೀಮಿತರಾಗದೆ ಬಹುಮುಖ ಪ್ರತಿಭೆಗಳಾಗಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ, ಕೊರಗ ಸಮುದಾಯದ ಮುಖ್ಯಸ್ಥ ಗಣೇಶ್ ಕುಂದಾಪುರ ಮೊದಲಾದವರಿದ್ದರು.
ರಾಜಶೇಖರ್ ಉಡುಪಿ ನಿರೂಪಿಸಿ, ವಂದಿಸಿದರು.