Thursday, July 7, 2022
Home ಕ್ರೀಡೆ ಕ್ರೀಡೆಯಿಂದ ಆತ್ಮವಿಶ್ವಾಸ ವೃದ್ಧಿ

ಕ್ರೀಡೆಯಿಂದ ಆತ್ಮವಿಶ್ವಾಸ ವೃದ್ಧಿ

ಉಡುಪಿ: ಕ್ರೀಡೆಯಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡೆಯಿಂದ ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು.

ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಡಾ| ಜಿ ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ ಮಂಗಳೂರು ವಿ.ವಿ. ಮಟ್ಟದ ಅಂತರ ಕಾಲೇಜು ಪುರುಷರು ಮತ್ತು ಮಹಿಳೆಯರು ಹಾಗೂ ಉಡುಪಿ ಜಿಲ್ಲಾ ಮಟ್ಟದ ಕಿರಿಯರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರೂ ಯಾವುದಾದರೊಂದು ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಕೊರೊನಾ ಲಾಕ್ ಡೌನ್ ನಂತರ ಇಡೀ ರಾಜ್ಯದಲ್ಲಿ ಕ್ರೀಡಾಕೂಟ ಸ್ತಬ್ಧವಾದಾಗ ಉಡುಪಿ ಜಿಲ್ಲೆಯಲ್ಲಿ ಮಾತ್ರ ಕಳೆದ ಜ. 26ರಿಂದ ಹಲವಾರು ಕ್ರೀಡಾಕೂಟಗಳು ನಡೆಯುತ್ತಿವೆ. ನಿರಂತರವಾಗಿ ಕ್ರೀಡಾಕೂಟ ನಡೆದು ಕ್ರೀಡಾ ಪ್ರತಿಭೆಗಳು ಹೊರಹೊಮ್ಮಬೇಕು. ಪಠ್ಯೇತರ ಚಟುವಟಿಕೆಗಳ ಜೊತೆಗೆ ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಕೊಳ್ಳಬೇಕು ಎಂದು ದಿನಕರಬಾಬು ಆಶಿಸಿದರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ದೈಹಿಕ ಶಿಕ್ಷಣದ ಮಹತ್ವ ಪುಸ್ತಕ ಅನಾವರಣಗೊಳಿಸಿ, ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ವಿಕಸನ ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಕಿಶೋರ್ ಕುಮಾರ್ ಸಿ. ಕೆ. ಪ್ರಸ್ತಾವನೆಗೈದರು. ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾಧಿಕಾರಿ ಜಿ. ಜಗದೀಶ, ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಶನ್ ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಅಧ್ಯಕ್ಷ ಕೆಂಪರಾಜ್ ಎಚ್. ಬಿ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ಮೊದಲಾದವರಿದ್ದರು.

ಡಾ| ಜಿ. ಶಂಕರ್ ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರೊ. ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ಪ್ರಶಾಂತ್ ವಂದಿಸಿ, ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!