ಕೃಷ್ಣಮಠದಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥರ ಸಂಸ್ಮರಣೆ
ಉಡುಪಿ: ಶ್ರೀಕೃಷ್ಣೈಕ್ಯರಾದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪ್ರಥಮಾರಾಧನೆ ಪ್ರಯುಕ್ತ ಗುರುವಾರ ಪರ್ಯಾಯ ಅದಮಾರು ಶ್ರೀಕೃಷ್ಣಮಠ ಆಶ್ರಯದಲ್ಲಿ ರಾಜಾಂಗಣದ ಶ್ರೀನರಹರಿತೀರ್ಥ ವೇದಿಕೆಯಲ್ಲಿ ಸಂಸ್ಮರಣ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಪರ್ಯಾಯಪೀಠಸ್ಥ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀ ವಿಶ್ವೇಶತೀರ್ಥರು ಸರಳ ವ್ಯಕ್ತಿತ್ವದೊಂದಿಗೆ ಸಾಮಾನ್ಯ ಜನರಿಗೂ ಬೇಕಾದವರಾಗಿದ್ದರು. ನಿಸ್ವಾರ್ಥ ಬದುಕನ್ನು ಸಮಾಜಕ್ಕಾಗಿ ಬಾಳಿದವರು. ಆಚಾರ್ಯ ಮಧ್ವ ಪ್ರಣೀತ ತತ್ವದೊಂದಿಗೆ ತನ್ನ ಜೀವನವನ್ನು ಮುಡಿಪಾಗಿಟ್ಟು ನಿತ್ಯಸಂಚಾರಿಗಳಾಗಿ ದೇಶದೆಲ್ಲೆಡೆ ತನ್ನ ಛಾಪು ಮೂಡಿಸಿ, ಆರ್ತರಿಗೆ ಸ್ಪಂದಿಸಿದ ಸನ್ಯಾಸಿಗಳಾಗಿದ್ದರು ಎಂದು ಸ್ಮರಿಸಿದರು
ಸಾನ್ನಿಧ್ಯ ವಹಿಸಿದ್ದ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ತಮ್ಮ ಹಾಗೂ ಶ್ರೀ ವಿಶ್ವೇಶತೀರ್ಥ ಶ್ರೀಪಾದರೊಂದಿಗಿನ ಅವಿನಾಭಾವ ಸಂಬಂಧ ಸ್ಮರಿಸಿದರು. ಅವರೊಂದಿಗೆ ತಮ್ಮ ವಿದ್ಯಾಭ್ಯಾಸ ಮತ್ತು ಸಂಚಾರದ ನೆನಪುಗಳನ್ನು ಬಿಚ್ಚಿಟ್ಟರು. ಗುರುಗಳನ್ನು ಚಾತುರ್ಮಾಸ್ಯ ವ್ರತವೊಂದನ್ನು ಹೊರತುಪಡಿಸಿ ಮತ್ತೆ ಎಂದೂ ಯಾರಿಂದಲೂ ಕಟ್ಟಿಹಾಕಲು ಸಾಧ್ಯವಾಗಿರಲಿಲ್ಲ. ಆ ಮೂಲಕ ಅವರು ನಿಜಾರ್ಥದ ಪರಿವ್ರಾಜಕರಾಗಿದ್ದರು. ಮಧ್ವಾಚಾರ್ಯರ ಮಾತಿನಂತೆ ನಾನಾ ಜನರ ಶುಶ್ರೂಷೆಯಲ್ಲಿ ನಿರತರಾಗಿದ್ದ ಗುರುಗಳ ಅನಂತ ಕಾರ್ಯಗಳು ಸದಾ ಸ್ಮರಣೀಯ. ಅವರ ಆದರ್ಶ ಪಾಲಿಸೋಣ ಎಂದರು.
ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಭಾರತದೆಲ್ಲೆಡೆ ಪ್ರೀತಿ ವಾತ್ಸಲ್ಯವನ್ನು ಸಾಮಾನ್ಯ ಜನರಿಗೆ ಹಂಚಿದ ಧೀರ ಸನ್ಯಾಸಿ ಗುರುಗಳಾದ ಶ್ರೀ ವಿಶ್ವೇಶತೀರ್ಥರು ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ವಿದ್ವಾಂಸರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯ ಮತ್ತು ಓಂಪ್ರಕಾಶ ಭಟ್ ಸಂಪಾದಿಸಿ, ಕುಕ್ಕೆ ಸುಬ್ರಹ್ಮಣ್ಯ ಮಠ ಶ್ರೀ ವೇದವ್ಯಾಸ ಸಂಶೋಧನ ಕೇಂದ್ರ ಪ್ರಕಟಿಸಿದ ಪೇಜಾವರ ಶ್ರೀಪಾದರ ಉಪನ್ಯಾಸ ಮತ್ತು ಲೇಖನಗಳಲ್ಲಿ ಪ್ರಸ್ತುತಗೊಂಡ ಚಿಂತನೆಗಳ ಸಂಗ್ರಹ ಚಿಂತನ ಶೇವಧಿ ಅನಾವರಣಗೊಳಿಸಲಾಯಿತು.