Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಸ್ವಯಂ ಪ್ರೇರಿತರಾಗಿ ಎಪಿಕ್ ಕಾರ್ಡ್ ಗೆ ಆಧಾರ್ ಜೋಡಿಸಿ

ಸ್ವಯಂ ಪ್ರೇರಿತರಾಗಿ ಎಪಿಕ್ ಕಾರ್ಡ್ ಗೆ ಆಧಾರ್ ಜೋಡಿಸಿ

ಸುದ್ದಿಕಿರಣ ವರದಿ
ಸೋಮವಾರ, ಆಗಸ್ಟ್ 1

ಸ್ವಯಂ ಪ್ರೇರಿತರಾಗಿ ಎಪಿಕ್ ಕಾರ್ಡ್ ಗೆ ಆಧಾರ್ ಜೋಡಿಸಿ
ಉಡುಪಿ: ಜಿಲ್ಲೆಯ ಪ್ರತಿಯೊಬ್ಬ ಮತದಾರರೂ ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ಎಪಿಕ್ ಕಾರ್ಡ್ ಗೆ ಸ್ವಯಂ ಪ್ರೇರಿತರಾಗಿ ಜೋಡಣೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಕರೆ ನೀಡಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಮತದಾರರ ಎಪಿಕ್ ಕಾರ್ಡ್ ಗೆ ಸ್ವಯಂಪ್ರೇರಿತವಾಗಿ ಆಧಾರ್ ಸಂಖ್ಯೆ ಜೋಡಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಯೋಗದ ಸೂಚನೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಪ್ರಮುಖ ಪಾತ್ರ ವಹಿಸಲಿದ್ದು, ಅದನ್ನು ಪಾರದರ್ಶಕ, ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಮತದಾರರ ಪಟ್ಟಿ ತಳಹದಿಯಾಗಿದೆ. ಅರ್ಹ ಮತದಾರರ ನೋಂದಣಿಯಾಗಿ ಅನರ್ಹರನ್ನು ಮತದಾರರ ಪಟ್ಟಿಯಿಂದ ಕೈಬಿಡಬೇಕು. ಭಾರತ ಚುನಾವಣಾ ಆಯೋಗ ಕೆಲವೊಂದು ತಿದ್ದುಪಡಿ ತರುವುದರೊಂದಿಗೆ ಮತದಾರರ ಎಪಿಕ್ ನ್ನು ಆಧಾರ್ ಗೆ ಜೋಡಣೆ ಮಾಡಲು ತಿಳಿಸಿದೆ ಎಂದರು.

ಸ್ವಯಂ ಪ್ರೇರಿತವಾಗಿ ಆಧಾರ್ ಜೋಡಣೆ ಮಾಡುವುದು ಸರಳ ಪ್ರಕ್ರಿಯೆಯಾಗಿದ್ದು, ಈ ಸಂದರ್ಭದಲ್ಲಿ ಗೋಪ್ಯತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಪ್ರತಿಯೊಬ್ಬ ಮತದಾರರು ಆಧಾರ್ ಜೋಡಣೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.

ಅರ್ಹತಾ ದಿನ ಸರಳೀಕೃತ
ಹೊಸದಾಗಿ ಮತದಾರರ ಪಟ್ಟಿಗೆ ದಾಖಲಾಗುವ ಯುವ ಮತದಾರರಿಗೆ ಸುಲಭವಾಗುವಂತೆ ಅರ್ಹತಾ ದಿನಾಂಕವನ್ನು ಸರಳಗೊಳಿಸುವುದರೊಂದಿಗೆ ವರ್ಷದಲ್ಲಿ ಜನವರಿ, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್ 1ನ್ನು ಅರ್ಹತಾ ದಿನಾಂಕವನ್ನಾಗಿ ನಿಗದಿಪಡಿಸಿದೆ.

ಯುವಜನರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ ಇದ್ದರು.

ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಬಿ. ಎನ್. ಸ್ವಾಗತಿಸಿದರು. ಅಶೋಕ್ ಕಾಮತ್ ನಿರೂಪಿಸಿ, ವಂದಿಸಿದರು.

ಸೇವಾದಳದ ಆರೂರು ತಿಮ್ಮಪ್ಪ ಶೆಟ್ಟಿ ಹಾಗೂ ಫಕೀರಪ್ಪ ಗೌಡ ಧ್ವಜ ನೀತಿ ಸಂಹಿತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಕಾರ್ಯಕ್ರಮ ನಡೆಸಿಕೊಟ್ಟರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!