Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಜನಸಾಮಾನ್ಯರಿಗೆ ಮಾನವ ಹಕ್ಕು ಅರಿವು ಮೂಡಿಸುವುದು ಅಗತ್ಯ

ಜನಸಾಮಾನ್ಯರಿಗೆ ಮಾನವ ಹಕ್ಕು ಅರಿವು ಮೂಡಿಸುವುದು ಅಗತ್ಯ

ಉಡುಪಿ: ಮಾನವ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ವಿಶ್ವದಾದ್ಯಂತ ಮಾನವ ಹಕ್ಕು ದಿನ ಆಚರಿಸಲಾಗುತ್ತದೆ. ಆ ಮೂಲಕ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರಚಂದ್ರ ಸೂಡ ಹೇಳಿದರು.

ಅಜ್ಜರಕಾಡು ರೆಡ್ ಕ್ರಾಸ್ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಗುರುವಾರ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಮಾನವನಿಗೆ ಸುಗಮ ಜೀವನ ನಡೆಸಲು ಮಾನವ ಹಕ್ಕು ಅತ್ಯಗತ್ಯ. ಮಾನವ ಹಕ್ಕುಗಳನ್ನು ಗೌರವಿಸಿ, ಅದರ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು. ಪ್ರತಿಯೊಬ್ಬ ನಾಗರಿಕ ಘನತೆ, ಗೌರವದಿಂದ ಕೂಡಿದ ಬದುಕುವ ಹಕ್ಕು ಹೊಂದಿರಬೇಕು ಎಂಬುದು ಮಾನವ ಹಕ್ಕುಗಳ ಆಶಯ. ಸಾಮಾಜಿಕ, ಆರ್ಥಿಕ, ಆರೋಗ್ಯ, ಸಮಾನತೆ ಸೇರಿದಂತೆ ಎಲ್ಲ ಬಗೆಯ ಮಾನವ ಹಕ್ಕುಗಳನ್ನು ಉಳಿಸಿ, ರಕ್ಷಿಸುವ ಕೆಲಸವಾಗಬೇಕು ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ ಡಾ| ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂವಿಧಾನ ಬದ್ಧವಾಗಿ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಸಮಾಜದಲ್ಲಿ ಮಾನವ ಹಕ್ಕುಗಳ ಸಂರಕ್ಷಣೆ ಸಾಧ್ಯ. ವಿದ್ಯಾರ್ಥಿಗಳು ಮಾನವ ಹಕ್ಕುಗಳ ಬಗ್ಗೆ ಮಾಹಿತಿ ಪಡೆದು ಜನಸಾಮಾನ್ಯರಿಗೆ ಅರಿವು ಮೂಡಿಸಬೇಕು ಎಂದರು.

ಸಂಪನ್ಮೂಲವ್ಯಕ್ತಿಯಾಗಿದ್ದ ವಕೀಲ ಮುಂಡ್ಕೂರು ವಿನಯ ಆಚಾರ್ಯ, ಮಾನವ ಸಹಜವಾಗಿ ಹುಟ್ಟಿನಿಂದ ಪಡೆದಿರುವ ನೈಸರ್ಗಿಕವಾದ ಹಕ್ಕುಗಳೇ ಮಾನವ ಹಕ್ಕುಗಳು. ಮನುಷ್ಯರಿಗೆ ಸ್ವತಂತ್ರವಾಗಿ ಜೀವಿಸುವ ಹಕ್ಕು ಸಮಾಜದಲ್ಲಿ ದೊರೆತಿದ್ದು, ಜನಸಾಮಾನ್ಯರ ಮೇಲೆ ಅಗುವ ಶೋಷಣೆ ತಡೆದು, ಮಾನವೀಯ ಮೌಲ್ಯದಲ್ಲಿ ಸ್ವತಂತ್ರವಾಗಿ ಬದುಕುವ ಹಕ್ಕು ಸಮಾಜದಲ್ಲಿ ಮಾನವನಿಗಿದೆ ಎಂದರು.

ಡಾ| ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ರೆಡ್ ಕ್ರಾಸ್ ಆಡಳಿತ ಮಂಡಳಿ ಸದಸ್ಯರು ಕಾರ್ಯಕ್ರಮದಲ್ಲಿದ್ದರು.

ರೆಡ್ ಕ್ರಾಸ್ ಸಂಸ್ಥೆ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ. ಜಿ. ಸ್ವಾಗತಿಸಿ, ಗೌರವ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ ನಿರೂಪಿಸಿದರು. ಗೌರವ ಖಜಾಂಚಿ ಡಾ. ಅರವಿಂದ ನಾಯಕ್ ಅಮ್ಮುಂಜೆ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!