ಮಣಿಪಾಲ: ಪತ್ರಿಕೋದ್ಯಮದ ಘನತೆ ಎತ್ತಿಹಿಡಿಯಲು ಮಾಧ್ಯಮ ಕ್ಷೇತ್ರದಲ್ಲಿ ತುರ್ತು ಬದಲಾವಣೆ ಅತ್ಯಗತ್ಯ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯ ವ್ಯಕ್ತಪಡಿಸಿದರು.
ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ)ಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಅಕಾಡೆಮಿ ಹಮ್ಮಿಕೊಂಡಿದ್ದ ಎಂ. ವಿ. ಕಾಮತ್ ಅಂತರ್ಜಾಲ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಧ್ಯಮ ಕ್ಷೇತ್ರದಲ್ಲಿ ಮೌಲ್ಯಗಳು ಕಣ್ಮರೆಯಾಗುತ್ತಿರುವ ಕುರಿತು ನಾಯ್ಡು ಆತಂಕ ವ್ಯಕ್ತಪಡಿಸಿದರು.
ಮಾಧ್ಯಮಗಳಿಂದ ಹರಡುತ್ತಿರುವ ಸುಳ್ಳು ಸುದ್ದಿಗಳು ಸರಕಾರ ಹಾಗೂ ಜನರ ಮಧ್ಯೆ ಬಹುದೊಡ್ಡ ಕಂದಕ ನಿರ್ಮಾಣ ಮಾಡುತ್ತಿದೆ. ಪ್ರಸ್ತುತ, ಪತ್ರಿಕೋದ್ಯಮದಲ್ಲಿ ನೈತಿಕ ಮೌಲ್ಯ ಮರೆಯಾಗುತ್ತಿದೆ. ಸುದ್ದಿ ಹಾಗೂ ಸುಳ್ಳು ಸುದ್ದಿಯ ನಡುವಿದ್ದ ತೆಳು ಪರದೆ ಮರೆಯಾಗುತ್ತಿದೆ. ಸುದ್ದಿಯಲ್ಲಿ ಅತಿರಂಜನೀಯ ಅಂಶಗಳು ಆದ್ಯತೆ ಪಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಮಾಧ್ಯಮಗಳಲ್ಲಿ ಪೇಯ್ಡ್ ನ್ಯೂಸ್ಗಳ ಅಬ್ಬರದ ನಡುವೆ ಪತ್ರಿಕೋದ್ಯಮದ ಮೌಲ್ಯಗಳು ಕುಸಿಯುತ್ತಿವೆ. ಮಾಧ್ಯಮ ಸ್ವಾತಂತ್ರ್ಯದ ರಕ್ಷಣೆ ಅನಿವಾರ್ಯ ಹಾಗೂ ಬಹಳ ಮುಖ್ಯವಾಗಿದ್ದರೂ ಪತ್ರಿಕಾ ಸ್ವಾತಂತ್ರ್ಯದ ಹೆಸರಿನಲ್ಲಿ ಮಾಧ್ಯಮ ಜವಾಬ್ದಾರಿ ಮರೆಯಬಾರದು ಎಂದವರು ಸಲಹೆ ನೀಡಿದರು.
ಪ್ರತಿನಿತ್ಯ ಅಣಬೆಗಳಂತೆ ಹುಟ್ಟಿಕೊಳ್ಳುತ್ತಿರುವ ಸುದ್ದಿ ಮಾಧ್ಯಮ ಸಂಸ್ಥೆಗಳಿಂದ ಪತ್ರಿಕೋದ್ಯಮದ ಮೌಲ್ಯಗಳು ಕುಸಿಯುತ್ತಿರುವಂತೆ ಭಾಸವಾಗುತ್ತಿದೆ. ಈಚೆಗೆ ಖ್ಯಾತ ಬಾಲಿವುಡ್ ನಟನ ಆತ್ಮಹತ್ಯೆ ಕುರಿತು ಬಿತ್ತರಿಸಿದ ಸುದ್ದಿಗಳು ವೀಕ್ಷಕರನ್ನು ಗೊಂದಲಕ್ಕೀಡುಮಾಡಿದವು. ಸುದ್ದಿ ಮತ್ತು ಅಭಿಪ್ರಾಯಗಳು ಯಾವಾಗಲೂ ಪ್ರತ್ಯೇಕವಾಗಿರಬೇಕು ಎಂದು ವೆಂಕಯ್ಯ ನಾಯ್ಡು ಸಲಹೆ ನೀಡಿದರು.
ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಎಂಐಸಿ ನಿರ್ದೇಶಕಿ ಡಾ| ಪದ್ಮಾರಾಣಿ ಇದ್ದರು.