ಕಟೀಲು: ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳು ಪ್ರಕಟಗೊಳ್ಳಲು ಸೂಕ್ತ ವೇದಿಕೆ ಕಲ್ಪಿಸುವುದು ಅಗತ್ಯ. ಅದು ಮಕ್ಕಳಲ್ಲಿ ವ್ಯಕ್ತಿತ್ವ ನಿರ್ಮಾಣ ಹಾಗೂ ಸ್ಪರ್ಧಾತ್ಮಕ ಮನೋಭಾವ ರೂಪಿಸಿಕೊಳ್ಳಲು ಪೂರಕವಾಗುತ್ತದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆನುವಂಶಿಕ ಅರ್ಚಕ ವೇ.ಮೂ. ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಪುನರೂರು ಪ್ರತಿಷ್ಠಾನ ಆಶ್ರಯದಲ್ಲಿ ಮೂಲ್ಕಿ ಜನವಿಕಾಸ ಸಮಿತಿ ಸಹಯೋಗದೊಂದಿಗೆ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಲ್ಲಿನ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಆಯೋಜಿಸಲಾದ ಪ್ರತಿಭಾ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳೂ ಸೇರಿದಂತೆ ಮಕ್ಕಳ ಸುಪ್ತ ಪ್ರತಿಭೆಗಳನ್ನು ಹೊರತರಲು ಇಂಥ ಕಾರ್ಯಕ್ರಮ ಪೂರಕ. ಈ ನಿಟ್ಟಿನಲ್ಲಿ ಸಂಘಟಕರ ಶ್ರಮ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಪುನರೂರು ಪ್ರತಿಷ್ಠಾನ ಗೌರವ ಅಧ್ಯಕ್ಷ ಹಾಗೂ ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಶುಭ ಹಾರೈಸಿದರು.
ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ, ಕಿನ್ನಿಗೋಳಿ `ಯುಗಪುರುಷ’ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಕಟೀಲು- ಎಕ್ಕಾರು ಲಯನ್ಸ್ ಕ್ಲಬ್ ಅಧ್ಯಕ್ಷ ಸ್ಟ್ಯಾನಿ ಪಿಂಟೊ, ಸೌತ್ ಕೆನರಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಮೂಲ್ಕಿ ವಲಯ ಅಧ್ಯಕ್ಷ ನವೀನಚಂದ್ರ, ಪುನರೂರು ಪ್ರತಿಷ್ಠಾನ ಗೌರವಾಧ್ಯಕ್ಷೆ ಎಚ್. ಕೆ. ಉಷಾರಾಣಿ, ಜನವಿಕಾಸ ಸಮಿತಿ ಅಧ್ಯಕ್ಷ ಜೀವನ್ ಶೆಟ್ಟಿ ಮೊದಲಾದವರಿದ್ದರು.
ಪುನರೂರು ಪ್ರತಿಷ್ಠಾನ ಅಧ್ಯಕ್ಷ ದೇವಪ್ರಸಾದ್ ಪುನರೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಜನವಿಕಾಸ ಸಮಿತಿ ಪ್ರಧಾನ ಕಾರ್ಯದರ್ಶಿ ಶೋಭಾ ರಾವ್ ವಂದಿಸಿದರು. ಜಿತೇಂದ್ರ ವಿ. ರಾವ್ ಹೆಜಮಾಡಿ ನಿರೂಪಿಸಿದರು.
ಬಳಿಕ ಮಕ್ಕಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.